Friday, May 8, 2009

Wednesday, May 6, 2009



ಕಾಲೇಜಿನ ಬೆಂಚುಗಳ ಉದ್ದಗಲಕ್ಕೂ ಕೆತ್ತಿದ ಅಕ್ಷರಗಳಲ್ಲಿ, ಯಾರಿಗೋ ಕೊಡಲು ಮನಸ್ಸಿಟ್ಟು ಮೆಚ್ಚಿ ಬರೆದ ಪದಗಳಲ್ಲಿ, ಅಗಲಿಕೆಯೆ ಅನಿವಾರ್ಯತೆಯ ಅಂಚಿನ ಆಟೋಗ್ರಾಫ್ ಎಂಬ ಸುಂದರ ಪುಸ್ತಕದ ಕೊನೆಯ ಹಾಳೆಯಲ್ಲಿ ನಮ್ಮನ್ನು ನಾವು ಬರೆದುಕೊಂಡಿದ್ದೇವೆ. ಈವರೆಗೆ ಬದುಕಿದ ಅಷ್ಟೂ ದಿನ ನಾವೊಂದು ಸುಂದರ ಬರಹವಾಗಿದ್ದೆವು ಎನ್ನುವುದನ್ನು ನನ್ನಂತ ಅದೆಷ್ಟೋ ಮಂದಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ!

ಆ ದಿನಗಳು ಎಲ್ಲಿ ಕಳೆದುಹೋದವೋ ಗೊತ್ತಿಲ್ಲ! ಯಾರು ಓದುತ್ತಾರೋ ಗೊತ್ತಿಲ್ಲ, ಹಠಕ್ಕೆ ಬಿದ್ದು ಬರೆಯುತ್ತಿದ್ದ ದಿನಗಳವು. ಆವಾಗೆಲ್ಲಾ ಬರೆಯೋದಕ್ಕೆ ವಿಷಯಗಳು ಬೇಕಾಗಿರಲಿಲ್ಲ. ಬರೆದದ್ದೇ ವಿಷಯವಾಗಿಬಿಡುತ್ತಿತ್ತು. ಬರೆದ ಪುಟ್ಟ ಲೇಖನಕ್ಕೆ ಗೆಳೆಯರ ಮೆಚ್ಚುನುಡಿ ಅದೇನೋ ಖುಷಿ ಕೊಡುತ್ತಿತ್ತು.

ಅಪರೂಪಕ್ಕೆ ಹೊತ್ತುಗೊತ್ತಿಲ್ಲದೆ ಬರುವ ಬೆಂಗಳೂರು ಮಳೆಯಂತೆ ಈ ಬರವಣಿಗೆಯೂ ಒಂಥರಾ ವಿಚಿತ್ರ. ಏನಾದರೂ ಬರೆಯಬೇಕು ಎಂದಾಗ ಯಾವ ವಿಷಯವೂ ಸಿಗೋಲ್ಲ. ವಿಷಯ ಸಾಕಷ್ಟಿದೆ, ಹೇಗೆ ಶುರುಮಾಡೋದು ಗೊತ್ತಾಗುತ್ತಿಲ್ಲ. ಆದರೂ ಅನ್ನಿಸಿದ್ದನ್ನು ಅಕ್ಷರವಾಗಿಸೋದಂದ್ರೆ ಅದೆಂಥದೋ ಮಜಾ...

ಹಾಗಾದರೆ ಶೇಕ್ಸ್‍ಪಿಯರ್, ಶೆಲ್ಲಿ, ಕೀಟ್ಸ್ ಇವರೆಲ್ಲಾ ನಮ್ಮಂತೆ ಮನುಷ್ಯರಲ್ವಾ? ಹತ್ತು ಜನುಮ ಕಳೆದರೂ ಹತ್ತಾರು ಬಗೆಯ ಅರ್ಥ ಕೊಡುವ ಹತ್ತರಿಂದ ಹನ್ನೆರಡು ಸಾಲುಗಳ ಪುಟ್ಟ ಪದ್ಯಗಳನ್ನು ಹೇಗೆ ಬರೆದರು ಅವರೆಲ್ಲಾ? ನಿಜ. ನಾವು ಕೇವಲ ಬರೆಯುತ್ತೇವೆ. ಅವರು ಬರವಣಿಗೆಯನ್ನು ಬದುಕುತ್ತಾರೆ!

ಈಗಲೂ ನೆನಪಿದೆ. ಹಾಸ್ಟೆಲ್‍ನಲ್ಲಿನ ಆ ದಿನಗಳು! ಒಂದು ರೂಪಾಯಿಯ ಆಕಾಶ ನೀಲಿ ಬಣ್ಣದ ಕಾಗದದ ತುದಿಯಲ್ಲಿ ಶ್ರೀ ಅಂತ ಶುರುಮಾಡಿ ಕೊನೆಯಲ್ಲಿ ‘ಇಂತಿ ನಿಮ್ಮ ಮಗ’ ಅಂತಾ ಕೊನೆಗೊಳಿಸುವ ಖುಷಿ ಈಗಿನ ಮೊಬೈಲ್ ಮೆಸೇಜಿಗಿಲ್ಲ ಬಿಡಿ. ಒಂದು ಸಮಾಧಾನ ಅಂದರೆ ಹಾಸ್ಟೆಲ್ ದಿನಗಳಲ್ಲಿಅಮ್ಮ ಬರೆದ, ಆಪ್ತ ಗೆಳೆಯ ಗೆಳತಿಯರು ಬರೆದ ಅಷ್ಟೂ ಕಾಗದಗಳು ಆ ನನ್ನಲ್ಲಿ ಇನ್ನೂ ಜೋಪಾನವಾಗಿವೆ. ಬಿಡುವಾದಾಗ ಓದುತ್ತೇನೆ... ತಂಪನೆಯ ಗಾಢ ಮೌನ ನನ್ನನ್ನು ಆವರಿಸುತ್ತದೆ. ಅಮ್ಮನ ಮುದ್ದಾದ ಅಕ್ಷರಗಳು ಮತ್ತೆ ನೆನಪಾಗುತ್ತದೆ.

ಬೆಂಗಳೂರಿಗೆ ಬಂದಾಗಿನಿಂದ ಬರವಣಿಗೆ ಮರೆತುಹೋಗಿದೆ. ಈಗ ಬರೆಯೋದು ಅಂದರೆ ಸಂಬಳದ ಚೆಕ್ ಹಿಂದೆ ಹಾಕೋದು ಅಷ್ಟೇ ಸೀಮಿತ! ಪರಿಸ್ತಿತಿ ನಮ್ಮನ್ನು ಬದಲಾಯಿಸಿದೆ. ಪುಸ್ತಕ ಓದುವ ಹುಚ್ಚಿತ್ತು. ಈಗ ಅದೂ ಬಿಟ್ಟು ಹೊಗಿದೆ. ಯಾವಾಗಲೂ ಚಾಟಿಂಗ್, ಆರ್ಕುಟ್, ಮೇಸೇಜುಗಳಲ್ಲಿ ನನ್ನನ್ನು ನಾನು ಕಳೆದುಕೊಂಡಿದ್ದೇನೆ ಅನ್ನಿಸುತ್ತದೆ. ಅರೆ! ಬರವಣಿಗೆಗೂ ರಿಸೆಸ್ಸನ್ ಬಂತಾ ಅಂತಂದುಕೊಂಡಿದ್ದು ನಿಜ.

ಪ್ರಶಸ್ತಿ ಪಡೆಯುವ ಪುಸ್ತಕ ಬರೆಯಬೇಕಾಗಿಲ್ಲ. ಕಡೇ ಪಕ್ಷ ನಾನು ಓದಬಹುದಾದ ಒಟ್ಟಾರೆ ಗೀಚಿದ ಒಂದಷ್ಟು ಸಾಲುಗಳನ್ನು ಬರೆಯಲೇಬೇಕು ಅಂತ ಹಠ ಮಾಡಿ ಬರೆಯಲು ಹೊರಟೆ. ಅಷ್ಟರಲ್ಲಾಗಲೇ ಈ ಪುಟ್ಟ ಬರವಣಿಗೆ ನಿಮ್ಮ ಮುಂದಿದೆ. ನನಗಾಗಿ ಓದಿ. ಸಾಧ್ಯವಾದರೆ ನನಗೆ ಬುದ್ಧಿ ಹೇಳಿ. ಮತ್ತೆ ಬರೆಯುತ್ತೇನೆ...