Friday, October 16, 2009


Monday, September 14, 2009

ಚಲಿಸುವಾ..ಚೆಲುವೆ....

ಮತ್ತೊಂದು ಮಿಕ್ಸಿಂಗ್ ಮಾಡಿದ್ದೇನೆ. ಹೊಸ ಕನ್ನಡ ಚಿತ್ರ ‘ಉಲ್ಲಾಸ ಉತ್ಸಾಹ’ದ ಹಾಡಿಗೆ ಹಿಂದಿ ರಣ್ ಬೀರ್ ಕಪೂರ್ ವಿಡಿಯೋ. ನೋಡ್ತೀರಲ್ವಾ...

Youtube: http://www.youtube.com/watch?v=4WSbKKjELmQ

Thursday, August 27, 2009

ಸ್ಸು ಬೆಂಗಳೂರಿಂದ ಹೋರಟಿದ್ದು ಲೇಟು. ಇಲ್ಲದಿದ್ದರೆ ಬೆಳಗ್ಗೆ 6:50ಕ್ಕೆ ಕಳಸ ತಲುಪಿರುತ್ತಿದ್ದೆ. ಅಲ್ಲಿಂದ ಬಸ್ರಿಕಟ್ಟೆಯ ನನ್ನ ಮನೆಗೆ 18ಕಿಮಿ. ಮೂರು ವರ್ಷಗಳಾದ ಮೇಲೆ ಹಬ್ಬಕ್ಕೆ ಮನೆಗೆ ಹೋರ‍ಟಿದ್ದು. ಸಹಜ ಕುತೂಹಲ ಜೊತೆಗೆ ರಾಶಿ ಪ್ರೀತಿ. ಕಳಸದಲ್ಲಿ ಇಳಿದಾಗಲೇ ಗೊತ್ತಾಗಿದ್ದು ಅದೇ ಬಸ್ಸಲ್ಲಿ ಹಳೇಯ ಖಾಯಂ ದೋಸ್ತ್‍ಗಳೂ ಇದ್ದರು ಅಂತ. ಕಳಸದಿಂದ ಮನೆ ಕಡೆ ಹೋಗೋ ಬಸ್ ಹತ್ತಿ ಕೊನೇಯ ಸೀಟಿನ ಮೂಲೆಯಲ್ಲಿ ಮುದುಡಿ ಕೂತೆ. ಸೀಳಿ ಬರುತ್ತಿತ್ತು ಛಳಿ ಗಾಳಿ. ಕಿವಿ ಬೆಚ್ಚಗಿರಲಿ ಅಂತಾ ಪ್ಲೇಯರ್ ಸಿಕ್ಕಿಸಿಕೊಂಡೆ. ಜೊತೆಗೆ ಇಷ್ಟದ ಹಾಡು. ಲೆಕ್ಕವಿಲ್ಲದಷ್ಟು ಸಲ ಓಡಾಡಿದ ಆ ದಾರ‍ಿಯಲ್ಲಿ ಕಳೆದುಹೋದ ನೆನಪುಗಳಿಗೆ ಲೆಕ್ಕವಿಲ್ಲ. ತಣ್ಣನೆಯ ಮುಂಜಾವಿನ ಸಿಹಿಗಾಳಿಯ ಜೊತೆಗೆ ಅವೂ ಹಿಂದೆಯೇ ಬರುತ್ತಿದ್ದವೋ ಏನೊ.

ಹುಟ್ಟೂರಿಗೆ ಕಾಲಿಡುತ್ತಿದ್ದಾಗಿನ ಪುಟ್ಟ ಖುಷಿಯ ಕಿಮ್ಮತ್ತೇ ಬೇರೆ. ಬಸ್ಸಿನಿಂದಿಳಿದ್ದು ಗೂಡಂಗಡಿ ಮೋಚುರಿಗೆ ಸಣ್ಣದೊಂದು ಸಲಾಮು ಹೊಡೆದು ಸಿಕ್ಕ ನಗುವಿನ ಜೊತೆ ಒಂಚೂರು ಮಾತು. ಮನೆ ಓಳಹೋಗುವ ಮುನ್ನ ಖಾಸಾ ದೋಸ್ತ್ ಶರೂ ಹಾಗು ಸಮ್ಮು ಸಿಕ್ಕಾಗ ಮತ್ತಷ್ಟು ಹೆಚ್ಚಿತ್ತು ಹಳ್ಳಿ ಪ್ರೀತಿ. ಮನೆಯ ಓಳ ಹೊಕ್ಕೆ. ಪಾತ್ರೆಗೆ ಸೋಪು ಹಚ್ಚುತ್ತಿದ್ದಳು ಅಮ್ಮ. ನಾನು ಬಂದಾಗ ಅವಳಲ್ಲಿನ ಹೊಸ ನಗು ಕಂಡುಹಿಡಿಯುವ ರೀತಿ ನನಗೆ ಹೊಸದಲ್ಲ. ‘ಇತ್ತೆ ಬತ್ತನಾ? ನಿದ್ರೆ ಬತ್ತುಂಡಾ?’ (ಇವಾಗ ಬಂದಿಯಾ? ನಿದ್ರೆ ಬಂತಾ?) (ಮನೆ ಬಾಷೆ ತುಳು) ಮನೆ ಬಿಟ್ಟು ೯ ವರ್ಷಗಳಾದರೂ ಆಕೆಯ ಕಾಳಜಿ, ಆರೈಕೆ, ನೀರು ದೋಸೆ ಹಾಗೂ ಚಹಾ ಇನ್ನೂ ಬದಲಾಗಿಲ್ಲ. ಎಷ್ಟಾದರೂ ಅಮ್ಮ ಅಲ್ವಾ.
ಸುಮ್ಮನೆ ಕೂರೋ ರೀತಿನೇ ಗೊತ್ತಿಲ್ಲ ಅಪ್ಪನಿಗೆ. ಹಳ್ಳಿಯ ಪ್ರತಿ ಅಪ್ಪಂದಿರೂ ಹೀಗೆನೇ. ಕೆಲಸವೇ ಅವರಿಗೆ ಸಮಾನ ಹಾಗೂ ಸಮಾಧಾನ. ಗ್ಯಾರೇಜಿನ ಮೆಶೀನುಗಳ ಮಧ್ಯೆ ಗ್ರ‍ಿಸು ಮೆತ್ತಿದ ಕೈಗಳಿಂದ ಕನ್ನಡಕ ತೆಗೆದು ಕ್ಷೇಮ ವಿಚಾರಿಸಿದರು. ಬೆಚ್ಚಗೆ ಬ್ರೇಕ್ ಫಾಸ್ಟ್ ಮಾಡಿ ಊರು ಸುತ್ತೋಕೆ ಹೊರ‍ಟೆ.

ಬಸ್ರಿಕಟ್ಟೆ ಬದಲಾಗಿಲ್ಲ. ಬದಲಾಗೋದೂ ನಮಗೆ ಬೇಕಿಲ್ಲ. ಎರಡು ವರ್ಷಕ್ಕೊಮ್ಮೆ ಇಲ್ಲಿನ ರಸ್ತೆಗೆ ಡಾಂಬಾರು ಹಚ್ಚಿ ಹೋಗುತ್ತಾರೆ. ಕಾಲುದಾರಿಯಲ್ಲಿ ಬರಿಗಾಲಲ್ಲಿ ಮೈಲಿಗಟ್ಟಗೆ ನಡೆಯೋ ಇಲ್ಲಿಯವರಿಗೆ ಅದು ಕಾಡುವ ಸಮಸ್ಯೆಯೇನಲ್ಲ. ಸ್ವಚ್ಛ ಊರು. ಹಾಗೆಯೇ ಮನಸ್ಸಿರೋ ಜನ. ಹತ್ತಿರದ ಊರು ಕುಪ್ಪಳ್ಳಿ, ಪಕ್ಕಕ್ಕೆ ತಾಗಿ ಮಲಗಿರೋ ಕಾಫಿ ತೋಟ, ತಲೆ ಇತ್ತಿ ಮುಖ ಮಾಡಿರೋ ಕುದುರೆಮುಖ, ನೆರಳಾಗಿ ನಿಂತಿರೋ ಮೇರುತಿ ಬೆಟ್ಟ. ಅರೆಕ್ಷಣ ಅಲ್ಲಿ ನಿಂತಿದ್ದ ನಾನು ಬರೇ ಸೂಕ್ಷ್ಮ! ಬಹುಶಃ ಇದೇ ಇರಬೇಕು ಹಳ್ಳಿ ಪ್ರೀತಿ.

ಉಳಿದೆರಡೂ ದಿನ ಗಮ್ಮತ್ತು. ಹಬ್ಬ ಹಬ್ಬ ಹಬ್ಬ. ಆತ್ಮೀಯ ಗೋಪಾಲ್ ಹಾಗೂ ಗೆಳೆಯರೊಂದಿಗೆ ತಡರಾತ್ರಿಯ ಸುಗಮ ಸಂಗೀತ. ನೆನೆಸಿಕೊಂಡರೆ ನಗು. ಜಿಟಿ ಜಿಟಿ ಮಳೆಯೊಂದಿಗೆ ಸಂಭ್ರಮದ ಓಡಾಟ. ಇಷ್ಟಾದರೂ ಕೆಲಸದೂರು ಬೆಂಗಳೂರು ನೆನಪಾಗಲಿಲ್ಲ. ನೆನಪು ಮಾಡಿಕೊಳ್ಳಲೂ ಮನಸಾಗುತ್ತಿರಲಿಲ್ಲ.

ಮೂರನೇ ಕ್ಲಾಸಿನಲ್ಲಿರುವಾಗ ಶಂಕರ ಹೆಗಡೆ ಅಂಗಂಡಿಯಿಂದ ಮಸಾಲೆ ಕಡಲೆ ಕದ್ದಾಗ ಆದ ಅನುಮಾನವೇ ದೊಡ್ಡದೆಂದು ನಂಬಿದ್ದೆ. ಆದರೆ ಅದಕ್ಕಿಂದ ಮಿಗಿಲಾದ ಮೊಗೆದಷ್ಟು ಪ್ರೀತಿ ಈ ಊರಲ್ಲಿದೆ ಅನ್ನೋದು ಈಗ ಕಂಡುಕೊಂಡಿದ್ದೀನಿ. ಎಲ್ಲೋ ಓದಿದ್ದೆ. ‘ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’. ಮತ್ತೆ ಮುಂಜಾವು. ನುಗ್ಗಿ ಬರುತ್ತಿತ್ತು ಮಳೆ. ವಾಪಾಸು ಹೊರಡಬೇಕು ರಾಜಧಾನಿಗೆ. ಆ ಜಡಿ ಮಳೆಯಲ್ಲೂ ಬೈಕ್ ಏರಿ ಬಸ್ಸು ಹತ್ತಿಸಿದ ಆತ್ಮೀಯ ಆನಂದ್.
ಬಿಟ್ಟು ಬಂದಿದ್ದೀನಿ. ಮೆತ್ತಗೆ ಕಾಡುವ ಮಾತನಾಡುವ ಊರನ್ನು ಮತ್ತೆ ಬರುತ್ತೀನಿ ಅನ್ನೋ ಮಾತು ಕೊಟ್ಟು. ಮುಂದಿನ ಬಾರಿ ನೀವೂ ಬನ್ನಿ. ನನ್ನೂರಿಗೆ...

Friday, August 21, 2009


Wednesday, August 19, 2009

Sunday, August 16, 2009

ತಂಗಾಳಿ ತಂದೆಯಾ ನನ ಬಾಳಲೀ...

ಟೈಮ್ ಪಾಸ್ ಅಂತಾ ಕನ್ನಡ ‘ಲವ್ ಗುರು’ ಚಿತ್ರದ ಹಾಡಿಗೆ ಶಾರುಕ್ ಖಾನ್ ನಟಿಸಿರೋ ಹಾಡುಗಳ ಕೆವಲನ್ನು ಮಿಕ್ಸ್ ಮಾಡಿದ್ದೇನೆ. ನೋಡ್ತೀರಲ್ವಾ...youtube link : http://www.youtube.com/watch?v=9sfT0TTocvg

Friday, August 7, 2009

‘ಆಣಿ’ ಮುತ್ತು...

ದುರಂಗದ ಮುಂದೆ ಕೂತು ಚದರಿ ಹೋದ ಕನಸುಗಳ ಕಲೆ ಹಾಕೋದೂ ಒಂಥರಾ ಮಜಾ ಅಲ್ವಾ? ನಾವೆಲ್ಲ ಅದರೊಳಗಿನ ಸೈನಿಕರು. ನಮ್ಮನ್ನು ನಡೆಸೋರು ಇನ್ಯಾರೋ. ಹೇಳೋದು ಮರೆತಿದ್ದೆ, ‘ಚೆಕ್ ಮೇಟ್’!



ನಿಜ. ಕೆಲವೊಮ್ಮೆ ಮೌನವೇ ಹಿತ ಅನಿಸೋದು. ಆದರೆ... ನೀ ಬಿಟ್ಟರೆ ನನಗಿನ್ಯಾರು ಹೇಳು. ನನ್ನೀ ಮೌನದ ಓಳಹೊಕ್ಕು ಚೆಂದದ ನಗು ಮೂಡಿಸೋ ತಾಕತ್ತು ಇರೋದು ನಿನಗೆ ಮಾತ್ರ ತಿಳ್ಕೊ.



ದಿಯೊಳಗಿನ ಪ್ರೀತಿ ಬಗ್ಗೆ ಹೇಳುತ್ತೀನಿ ಅಂದ್ಯಲ್ಲಾ, ಹೇಳು ಇವಾಗ. ಮತ್ತೊಂದು ಸಣ್ಣ ಅಲೆ ಮೂಡಿ ಮತ್ತೊಲ್ಲೋ ಸುಳಿಯೂಗಿ ನೆನಪುಗಳೆಲ್ಲಾ ಸುಳಿವಿಲ್ಲದೆ ಅಳಿಸಿಹೋಗುವ ಮುನ್ನ. ಹೇಳು ಪ್ಲೀಸ್..



ನಾನಿದ್ದೀನಿ. ನೋವನ್ನೆಲ್ಲಾ ಪಕ್ಕಕ್ಕಿಡು. ಮಾತನಾಡು. ಬಾಯಿ ನೋವಾಗುವಷ್ಟು, ಮನಸು ಹಗುರಾಗುವಷ್ಟು. ನೀನು ಮತ್ತೊಮ್ಮೆ ನಗುವಾಗಬೇಕು. ನಲಿದಾಡುವ ಮಗುವಾಗಬೇಕು.


ಲಿದಾಡಬೇಕು. ನೀನಿಲ್ಲ. ಸಾಕೆನಿಸದಷ್ಟು ಧೈರ್ಯ ತುಂಬಿ ಹೊತ್ತು ಕಂತುವ ಹೊತ್ತಲ್ಲಿ ಮತ್ತೆ ಮೆತ್ತಗೆ ಮಾತಾಡಲು ನೀನಿಲ್ಲ. ನೀನಂದಿದ್ದು ನಿಜ. ಮೌನವೇ ಹಿತ.




ಛೆ! ಹಾಗಾಗಲಿಕ್ಕಿಲ್ಲ. ನನ್ನಲ್ಲಿ ಪ್ರೀತಿ ಹುಟ್ಟಿಸಿ ಮತ್ತೊಲ್ಲೋ ಮುತ್ತಾಗುವ ಹುಡುಗ ಅವನಲ್ಲ. ಗೊತ್ತು ನನಗೆ. ಬಂದೇ ಬರುತ್ತಾನೆ. ನದಿ ಪ್ರೀತಿ ಹುಟ್ಟೋ ರೀತಿ ಹೇಳುತ್ತಾನೆ. ಬರುತ್ತಿಯಲ್ವಾ...


ತ್ತೊಲ್ಲೋ ಬಂಧಿಯಾಗಿದ್ದೇನೆ. ಇದ್ಯಾವ ಲೆಕ್ಕ ನಿನ್ನ ಪ್ರೀತಿ ಬೆಚ್ಚಗೆ ಬಂಧಿಸಿರುವಾಗ... ಸಾಧ್ಯವಾದರೆ ಕ್ಷಮಿಸು

Friday, July 31, 2009


‘ಸಲಾಮ್ ಸಿನೆಮಾ’
‘ಸಾರ್ ಈವಾಗ್ಲೆ ಅಳಬೇಕಾ?’ ಇಪ್ಪತ್ತರ ಆಸುಪಾಸಿನ ಹುಡುಗ ಮಹಮ್ಮದ್ ಹಾದಿ ಆ ಕ್ಷಣಕ್ಕೆ ಅಳೋದಕ್ಕೆ ಸಿದ್ಧನಿರಲಿಲ್ಲ. ಕತ್ತಲಿನ ರಿಹರ್ಸಲ್ ಹಾಲ್‍ನಲ್ಲಿ ಮಾರುದ್ದ ಚೆಲ್ಲಿಕೊಂಡಿದ್ದ ಹ್ಯಾಲೋಜಿನ್ ಬೆಳಕಲ್ಲಿ ಆತನ ಮುಖ ಸ್ಪಷ್ಟವಾಗಿ ಕಾಣಿಸಿತ್ತಿಲ್ಲವಾದರೂ ಮೇಜಿನ ಮೇಲೆ ಒಂದಷ್ಟು ಕಾಗದದ ರಾಶಿಯ ನಡುವೆ ಮೊಣಕೈ ಗಲ್ಲಕ್ಕಿಟ್ಟು ‘ಕೇವಲ ಹತ್ತು ನಿಮಿಷ ಕೋಡುತ್ತೇನೆ. ಅಳಬೇಕು.’ ಎಂದು ಹಠ ಹಿಡಿದ ಮಗುವಿನಂತೆ ಕುಳಿತಿದ್ದ ಮಕ್ಬಲ್‍ಬಫ್.

ಇದು ಸಿನಿಮಾನಾ ಅಥವಾ ಸಾಕ್ಷ್ಯಚಿತ್ರನಾ ಅಂತಂದುಕೊಳ್ಳುವಷ್ಟರಲ್ಲಿ ಕಪ್ಪು ಪರದೆಯಲ್ಲಿ ಎಡದಿಂದ ಬಲಕ್ಕೆ ಹೆಸರುಗಳು ಬರಲಾರಂಭಿಸಿದವು. ಅಪರೂಪಕ್ಕೆ ನೋಡಿದ ನೆನಪಿಟ್ಟುಕೊಳ್ಳುವ ಸಿನಿಮಾ ಅದು. ಹೆಸರು ‘ಸಲಾಮ್ ಸಿನೆಮಾ’. ೧೯೯೪ ರಲ್ಲಿ ತೆರೆಕಂಡ ಪರ್ಷಿಯನ್ ಚಿತ್ರ. ಮೊಹಸೆನ್ ಮಕ್ಬಲ್‍ಬಫ್ ನಿರ್ದೇಶನದ ಈ ಚಿತ್ರಕ್ಕೆ ಸಿನೆಮಾನೆ ಕಥಾವಸ್ತು! ಸಿನೆಮಾ ಆತನಿಗೆ ಉಸಿರು. ಕ್ಯಾಮರಾಗಳು ಮಾತನಾಡುತ್ತವೆ! ಅವನ್ನು ಹತ್ತಿರದಿಂದ ಬಲ್ಲೆ ಎಂದು ಅದರ ಲೆನ್ಸ್ ಪಕ್ಕದಲ್ಲಿ ಮುಖವಿಟ್ಟು ಗಂಟೆಗಟ್ಟಲೆ ತಾನು ಹುಡುಕುತ್ತಿದ್ದ ಆ ಅದ್ಭುತ ಫ್ರೇಮ್‍ಗಾಗಿ ಹುಡುಕುತ್ತಿರುತ್ತಾನೆ.

‘ನೂರು ಅತ್ಯುತ್ತಮ ನಟ-ನಟಿಯರು ಬೇಕಾಗಿದ್ದಾರೆ’ ಹಾಗಂತ ಜಾಹಿರಾತು ನೀಡಿದ್ದ ಮಕ್ಬಲ್‍ಬಫ್ ಆಡಿಶನ್ ದಿನ ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ. ಆ ಮಹಾ ದೊಂಬಿಯ ಮಧ್ಯದಿಂದ ಬೆರಳೆಣಿಕೆಯಷ್ಟು ಜನರನ್ನು ಕಲಾವಿದರನ್ನಾಗಿಸೋ ಕಲೆ ಬಹುಶಃ ಆತನಿಗೆ ಮಾತ್ರ ಸಾಧ್ಯವಿತ್ತು ಅನ್ನೋದು ಚಿತ್ರ ನೋಡಿದಾಗ ದೃಢವಾಗುತ್ತದೆ. ಅವಕಾಶಕ್ಕಾಗಿ ಮೈಲಿಗಟ್ಟಲೆ ನಡೆದು ಪಕ್ಕದ ಪಾರ್ಕ್‍ನಲ್ಲಿ ಮಲಗೆದ್ದು ಬಂದಿದ್ದ ಅದೆಷ್ಟೋ ಮಂದಿ ಕ್ಯಾಮರಾ ಮುಂದೆ ಮೌನರಾಗುತ್ತಾರೆ.

ಬುರ್ಕಾ ತೊಟ್ಟು ಹದಿಹರೆಯದ ಕಾಲೇಜು ಹುಡುಗೀರು ಅವಕಾಶಕ್ಕಾಗಿ ಗೋಗರೆಯುತ್ತಾರೆ. ಇಂತಹ ಅದೆಷ್ಟೋ ಮಹಿಳೆಯರಲ್ಲಿ ತೊಟ್ಟ ಬುರ್ಕಾದಂತೆ ಪ್ರತಿಭೆ ತನ್ನನ್ನು ಮುಚ್ಚಬಾರದೆಂಬ ಹಠ ಮಕ್ಬಲ್‍ನಲ್ಲಿ ಕುತೂಹಲ ಹುಟ್ಟಿಸುತ್ತದೆ. ನಡೆಯುವ ಪ್ರತಿ ಘಟನೆ ಕ್ಯಾಮರಾದಲ್ಲಿ ದಾಖಲಾಗುತ್ತದೆ. ಆದರೆ ಅವರಿಗೆ ತಾವೆಲ್ಲಾ ಒಂದು ಪುಟ್ಟ ಸಿನೆಮಾದ ಪಾತ್ರದೊಳಗೆ ಪಾತ್ರಕ್ಕಾಗಿ ಹಪಹಪಿಸುತ್ತಿದ್ದೇವೆ ಅನ್ನೋ ಸತ್ಯ ಚಿತ್ರ ಬಿಡುಗಡೆಯಾಗುವವರೆಗೆ ತಿಳಿಯುವುದಿಲ್ಲ!

ಅಲ್ಲಿದ್ದ ಅಷ್ಟೂ ಮಂದಿಗೂ ಮಕ್ಬಲ್ ಹೇಳುವ ಹಾಗೂ ಕೇಳುವ ಮೊದಲ ಪ್ರಶ್ನೆ - ‘೩೦ ಸೆಕೆಂಡ್ ಕೋಡುತ್ತೇನೆ. ಅಳಬೇಕು’. ತಾಳ್ಮೆ ಕಳೆದುಕೊಂಡ ಒಬ್ಬಾತ, ‘ಏಕಾ ಏಕಿ ಅಳೋದಂದ್ರೆ ತಮಾಷೆನಾ? ನಿಮ್ಮ ಸಹ ಕಲಾವಿದರು ಆ ೩೦ ಸೆಕೆಂಡ್‍ನಲ್ಲಿ ಅತ್ತು ತೋರಿಸಲಿ ನೋಡೋಣ... ಸವಾಲಿಗೆ ಮಕ್ಬಲ್ ಗಲ್ಲದ ಮೇಲಿಟ್ಟು ಅಲ್ಲೇ ದೂರದಲ್ಲಿ ಹ್ಯಾಲೊಜಿನ್ ಬಲ್ಬ್ ಹಿಡಿದು ನಿಂತಿದ್ದ ಇಳಿ ವಯಸ್ಸಿನ ಜಾಹೆದ್‍ನನ್ನು ಕರೆಯುತ್ತಾನೆ. ಕ್ಯಾಮರಾದ ಮುಂದೆ ಬಂದು ನಿಂತ ಜಾಹೆದ್ ಅರೆ ಕ್ಷಣದಲ್ಲಿ ಅತ್ತುಬಿಡುತ್ತಾನೆ. ಎಲ್ಲರೂ ಮೌನ! ಮಕ್ಬಲ್‍ನ ಗರಡಿಯಲ್ಲಿ ಪಳಗಿದಾಗಿನಿಂದ ಬದುಕಿನ ಸೂಕ್ಷತೆಗೆ ಒಗ್ಗಿಕೊಂಡ ರೀತಿ ಇಲ್ಲಿ ಸ್ಪಷ್ಟವಾಗುತ್ತದೆ.
"Not everyone can become a great artist.but a great artist can come from anywhere"
ಪ್ರೇಕ್ಷಕರೇ ಪಾತ್ರಗಳಾದ ಈ ಚಿತ್ರ ಸಿಕ್ಕರೆ ನೋಡಿ. ನೀವೂ ಹೇಳುತ್ತೀರ...‘ಸಲಾಮ್ ಸಿನೆಮಾ’...
(ಈ ಸಿನೆಮಾ ನೋಡು ಅಂತಾ ತಾಕೀತು ಮಾಡಿದ ನನ್ನ ಗೆಳೆಯನಿಗೂ ಸಲಾಮ್!)

Wednesday, July 15, 2009

ಇನ್ನೆರಡು ಹೊಸ ವಿನ್ಯಾಸಗಳು


ಆಳ್ವಾಸ್ ಕಾಲೇಜಿನ ವಾರ್ಷಿಕ ಸಂಚಿಕೆ / ಜೈ ಕನ್ನಡಮ್ಮ ವಿಶೇಷಾಂಕ

Monday, June 29, 2009


Friday, May 8, 2009

Wednesday, May 6, 2009



ಕಾಲೇಜಿನ ಬೆಂಚುಗಳ ಉದ್ದಗಲಕ್ಕೂ ಕೆತ್ತಿದ ಅಕ್ಷರಗಳಲ್ಲಿ, ಯಾರಿಗೋ ಕೊಡಲು ಮನಸ್ಸಿಟ್ಟು ಮೆಚ್ಚಿ ಬರೆದ ಪದಗಳಲ್ಲಿ, ಅಗಲಿಕೆಯೆ ಅನಿವಾರ್ಯತೆಯ ಅಂಚಿನ ಆಟೋಗ್ರಾಫ್ ಎಂಬ ಸುಂದರ ಪುಸ್ತಕದ ಕೊನೆಯ ಹಾಳೆಯಲ್ಲಿ ನಮ್ಮನ್ನು ನಾವು ಬರೆದುಕೊಂಡಿದ್ದೇವೆ. ಈವರೆಗೆ ಬದುಕಿದ ಅಷ್ಟೂ ದಿನ ನಾವೊಂದು ಸುಂದರ ಬರಹವಾಗಿದ್ದೆವು ಎನ್ನುವುದನ್ನು ನನ್ನಂತ ಅದೆಷ್ಟೋ ಮಂದಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ!

ಆ ದಿನಗಳು ಎಲ್ಲಿ ಕಳೆದುಹೋದವೋ ಗೊತ್ತಿಲ್ಲ! ಯಾರು ಓದುತ್ತಾರೋ ಗೊತ್ತಿಲ್ಲ, ಹಠಕ್ಕೆ ಬಿದ್ದು ಬರೆಯುತ್ತಿದ್ದ ದಿನಗಳವು. ಆವಾಗೆಲ್ಲಾ ಬರೆಯೋದಕ್ಕೆ ವಿಷಯಗಳು ಬೇಕಾಗಿರಲಿಲ್ಲ. ಬರೆದದ್ದೇ ವಿಷಯವಾಗಿಬಿಡುತ್ತಿತ್ತು. ಬರೆದ ಪುಟ್ಟ ಲೇಖನಕ್ಕೆ ಗೆಳೆಯರ ಮೆಚ್ಚುನುಡಿ ಅದೇನೋ ಖುಷಿ ಕೊಡುತ್ತಿತ್ತು.

ಅಪರೂಪಕ್ಕೆ ಹೊತ್ತುಗೊತ್ತಿಲ್ಲದೆ ಬರುವ ಬೆಂಗಳೂರು ಮಳೆಯಂತೆ ಈ ಬರವಣಿಗೆಯೂ ಒಂಥರಾ ವಿಚಿತ್ರ. ಏನಾದರೂ ಬರೆಯಬೇಕು ಎಂದಾಗ ಯಾವ ವಿಷಯವೂ ಸಿಗೋಲ್ಲ. ವಿಷಯ ಸಾಕಷ್ಟಿದೆ, ಹೇಗೆ ಶುರುಮಾಡೋದು ಗೊತ್ತಾಗುತ್ತಿಲ್ಲ. ಆದರೂ ಅನ್ನಿಸಿದ್ದನ್ನು ಅಕ್ಷರವಾಗಿಸೋದಂದ್ರೆ ಅದೆಂಥದೋ ಮಜಾ...

ಹಾಗಾದರೆ ಶೇಕ್ಸ್‍ಪಿಯರ್, ಶೆಲ್ಲಿ, ಕೀಟ್ಸ್ ಇವರೆಲ್ಲಾ ನಮ್ಮಂತೆ ಮನುಷ್ಯರಲ್ವಾ? ಹತ್ತು ಜನುಮ ಕಳೆದರೂ ಹತ್ತಾರು ಬಗೆಯ ಅರ್ಥ ಕೊಡುವ ಹತ್ತರಿಂದ ಹನ್ನೆರಡು ಸಾಲುಗಳ ಪುಟ್ಟ ಪದ್ಯಗಳನ್ನು ಹೇಗೆ ಬರೆದರು ಅವರೆಲ್ಲಾ? ನಿಜ. ನಾವು ಕೇವಲ ಬರೆಯುತ್ತೇವೆ. ಅವರು ಬರವಣಿಗೆಯನ್ನು ಬದುಕುತ್ತಾರೆ!

ಈಗಲೂ ನೆನಪಿದೆ. ಹಾಸ್ಟೆಲ್‍ನಲ್ಲಿನ ಆ ದಿನಗಳು! ಒಂದು ರೂಪಾಯಿಯ ಆಕಾಶ ನೀಲಿ ಬಣ್ಣದ ಕಾಗದದ ತುದಿಯಲ್ಲಿ ಶ್ರೀ ಅಂತ ಶುರುಮಾಡಿ ಕೊನೆಯಲ್ಲಿ ‘ಇಂತಿ ನಿಮ್ಮ ಮಗ’ ಅಂತಾ ಕೊನೆಗೊಳಿಸುವ ಖುಷಿ ಈಗಿನ ಮೊಬೈಲ್ ಮೆಸೇಜಿಗಿಲ್ಲ ಬಿಡಿ. ಒಂದು ಸಮಾಧಾನ ಅಂದರೆ ಹಾಸ್ಟೆಲ್ ದಿನಗಳಲ್ಲಿಅಮ್ಮ ಬರೆದ, ಆಪ್ತ ಗೆಳೆಯ ಗೆಳತಿಯರು ಬರೆದ ಅಷ್ಟೂ ಕಾಗದಗಳು ಆ ನನ್ನಲ್ಲಿ ಇನ್ನೂ ಜೋಪಾನವಾಗಿವೆ. ಬಿಡುವಾದಾಗ ಓದುತ್ತೇನೆ... ತಂಪನೆಯ ಗಾಢ ಮೌನ ನನ್ನನ್ನು ಆವರಿಸುತ್ತದೆ. ಅಮ್ಮನ ಮುದ್ದಾದ ಅಕ್ಷರಗಳು ಮತ್ತೆ ನೆನಪಾಗುತ್ತದೆ.

ಬೆಂಗಳೂರಿಗೆ ಬಂದಾಗಿನಿಂದ ಬರವಣಿಗೆ ಮರೆತುಹೋಗಿದೆ. ಈಗ ಬರೆಯೋದು ಅಂದರೆ ಸಂಬಳದ ಚೆಕ್ ಹಿಂದೆ ಹಾಕೋದು ಅಷ್ಟೇ ಸೀಮಿತ! ಪರಿಸ್ತಿತಿ ನಮ್ಮನ್ನು ಬದಲಾಯಿಸಿದೆ. ಪುಸ್ತಕ ಓದುವ ಹುಚ್ಚಿತ್ತು. ಈಗ ಅದೂ ಬಿಟ್ಟು ಹೊಗಿದೆ. ಯಾವಾಗಲೂ ಚಾಟಿಂಗ್, ಆರ್ಕುಟ್, ಮೇಸೇಜುಗಳಲ್ಲಿ ನನ್ನನ್ನು ನಾನು ಕಳೆದುಕೊಂಡಿದ್ದೇನೆ ಅನ್ನಿಸುತ್ತದೆ. ಅರೆ! ಬರವಣಿಗೆಗೂ ರಿಸೆಸ್ಸನ್ ಬಂತಾ ಅಂತಂದುಕೊಂಡಿದ್ದು ನಿಜ.

ಪ್ರಶಸ್ತಿ ಪಡೆಯುವ ಪುಸ್ತಕ ಬರೆಯಬೇಕಾಗಿಲ್ಲ. ಕಡೇ ಪಕ್ಷ ನಾನು ಓದಬಹುದಾದ ಒಟ್ಟಾರೆ ಗೀಚಿದ ಒಂದಷ್ಟು ಸಾಲುಗಳನ್ನು ಬರೆಯಲೇಬೇಕು ಅಂತ ಹಠ ಮಾಡಿ ಬರೆಯಲು ಹೊರಟೆ. ಅಷ್ಟರಲ್ಲಾಗಲೇ ಈ ಪುಟ್ಟ ಬರವಣಿಗೆ ನಿಮ್ಮ ಮುಂದಿದೆ. ನನಗಾಗಿ ಓದಿ. ಸಾಧ್ಯವಾದರೆ ನನಗೆ ಬುದ್ಧಿ ಹೇಳಿ. ಮತ್ತೆ ಬರೆಯುತ್ತೇನೆ...