Tuesday, June 3, 2008







ಅದೊಂದು ಸಣ್ಣ ಪಾರ್ಟಿ ಹಾಲ್. ಎಲ್ಲೆಲ್ಲೂ ಜಿಗಿ ಜಿಗಿ ಜನ. ಅಲ್ಲೇ ಬಲಗಡೆ ಒಪ್ಪವಾಗಿ ಜೋಡಿಸಿಟ್ಟಿದ್ದ ಪೋರ್ಟ್ ವೈನ್ ಬಾಟಲಿಗಳು ಅದೆಷ್ಟು ವರ್ಷ ಹಳೆಯದೋ. ಬಂದವರಿಗೆಲ್ಲಾ ಅದೇ ಕುತೂಹಲ. ಯಾವುದೋ ಮೂಲೆಯಿಂದ ಕೇಳಿಬರುತ್ತಿದ್ದ ಗ್ರಾಮೋಫೋನ್ ಗಾನ. ಅದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಿದ್ದ ಬೆರಳೆಣಿಕೆಯ ಜೊಡಿಗಳಿಗೆ ಅದೇನೋ ಮುಜುಗರ. ಕೆಲವರಿಗೆ ಸಂಗಾತಿಯ ಕೊರತೆ. ಕೆಲವರಲ್ಲಿ ಅವರ ಮನೆತನವನ್ನು ಪ್ರತಿಬಿಂಬಿಸುವ ತವಕ.
ಒಂದು ಹುಡುಗಿ ಇಷ್ಟು ಮುದ್ದಾಗಿರಲು ಸಾಧ್ಯವಾ? ಮೊದಲ ಸಲ ಆಕೆಯನ್ನು ನೋಡಿದ ಆ ಹುಡುಗನಿಗೆ ಅನಿಸಿದ್ದಿಷ್ಟು. ಉದ್ದನೆಯ ಮೂಗು. ಅದರಂಚಿನಲ್ಲಿ ಮುದ್ದಾದ ನಗು. ಆ ನಗುವಿನ ಮಧ್ಯೆ ತೂರಿ ಬರುತ್ತಿದ್ದ ಆ ನೀಳ ಕೂದಲು. ಆ ಹುಡುಗ ಬೆರಗಾಗಲು ಇಷ್ಟು ಸಾಕಿತ್ತು. ಧ್ಯೆರ್ಯ ಮಾಡಿ ಆಕೆಯೊಂದಿಗೆ ಮಾತಿಗಿಳಿದ. ಅಲ್ಲಿ ಮೌನವೇ ಮೇಲಾಗಿತ್ತು. ಹತ್ತಿರದ ಸಣ್ಣ ಕಾಫಿ ಬಾರ್‌ಗೆ ಆಕೆಗೆ ಆಹ್ವಾನವಿತ್ತ. ಆಕೆಗೂ ಆಶ್ಚರ್ಯ. ಯಾರೀತ? ಇದೇನಿದು ಧೈರ್ಯ! ಅವನಲ್ಲಿನ ಮುಗ್ಧತೆ ಆಕೆಯನ್ನು ಹೆಚ್ಚು ಕಾಲ ಕಾಯಿಸಲಿಲ್ಲ.
ಇಬ್ಬರೂ ಎದುರುಬದುರು ಕುಳಿತಿದ್ದಾರೆ. ಸುತ್ತಲೂ ಬೆಂಚು ಕುರ್ಚಿ ಬಿಟ್ಟರೆ ಬೇರಾರೂ ಇಲ್ಲವೆನ್ನುವುದು ಇಬ್ಬರಿಗೂ ಅರಿವಾಯಿತು. ಆತ ಬಹಳ ಕಸಿವಿಸಿಗೊಂಡಿದ್ದ. ಮಾತಾಡಲು ಶಬ್ದಗಳ ಹುಡುಕಾಟದಲ್ಲಿದ್ದ. ಆಗ ತಾನೆ ಆರ್ಡರ್ ಮಾಡಿದ್ದ ಕಾಫಿಯನ್ನು ಎದುರಿಟ್ಟುಕೊಂಡು ಇಬ್ಬರೂ ಮೌನಲೋಕದಲ್ಲಿದ್ದಾರೆ. ಆಕೆಗೆ ಏನನಿಸಿತೋ ಏನೋ; ಅಲ್ಲಿಂದ ಹೊರಡಲು ಮುಂದಾದಳು. ಮನೆಗೆ ಹೊರಡುತ್ತೇನೆಂದು ಎದ್ದು ನಿಂತಳು.
ಕೂಡಲೇ ಆತ ವೈಟರ್‌ನನ್ನು ಕರೆದು ಕಾಫಿಗೆ ಸ್ವಲ್ಪ ಉಪ್ಪು ಹಾಕಲು ಹೇಳಿದ. ವೈಟರ್ ದಂಗಾದ! ಆತನ ಮುಖ ಕೆಂಪೇರಿತು. ಆದರೂ ಉಪ್ಪನ್ನು ಕಾಫಿಗೆ ಬೆರೆಸಿ ಕುಡಿದದ್ದು ತೀರಾ ಸ್ವಾಭಾವಿಕವಾಗಿತ್ತು. ಹೊರಟು ನಿಂತ ಆಕೆಗೂ ಆಶ್ಚರ್ಯ ಜೊತೆಗೆ ಕುತೂಹಲ. ‘ಯಾಕೆ ಕಾಫಿಗೆ ಉಪ್ಪು ಬೆರೆಸಿ ಕುಡಿಯುತ್ತೀರಾ?’ ಮುಗ್ಧ ಪ್ರಶ್ನೆ ಮುಂದಿಟ್ಟಳು. ‘ಓ ಅದಾ, ನಾನು ಸಮುದ್ರ ತೀರದಲ್ಲೇ ಬೆಳೆದದ್ದು. ನನಗೆ ಉಪ್ಪೇ ಸಿಹಿ ಇದ್ದಂತೆ. ಈ ಥರ ಉಪ್ಪಿನ ಕಾಫಿ ಕುಡಿಯುತ್ತಿದ್ದರೆ ಸಮುದ್ರದ ನೀರು ಕುಡಿದಂತಾಗುತ್ತದೆ’ ಅವನದು ಸ್ಪಷ್ಟ ಉತ್ತರ.
“ಪ್ರತಿ ಸಲ ಈ ಉಪ್ಪಿನ ಕಾಫಿ ಕುಡಿಯುತ್ತಿದ್ದರೆ ನನ್ನ ಬಾಲ್ಯದ ನೆನಪಾಗುತ್ತದೆ. ಸಮುದ್ರ ಕಿನಾರೆಯ ಆ ಸುಂದರ ಮನೆ, ಅಲ್ಲಿಯ ಸೂರ್ಯಾಸ್ತ, ಅಲೆಗಳ ಅಬ್ಬರ ಇವೆಲ್ಲಾ ಇನ್ನೆಲ್ಲಿ ಸಿಗುತ್ತೆ? ಅಲ್ಲಿ ನನ್ನ ಅಪ್ಪ-ಅಮ್ಮ ಇದ್ದಾರೆ. ಅವರ ನೆನಪಾದಾಗ ಈ ರೀತಿ ಉಪ್ಪಿನ ಕಾಫಿ ಮುದ ನೀಡುತ್ತದೆ” ಆತ ಮಾತು ಮುಗಿಸಿದ. ಅವನ ಕಣ್ಣಂಚಿನಲ್ಲಿ ಮೂಡಿದ ಹನಿಗಳು ಆಕೆಯ ಮನ ಕಲಕಿತು. ಬೆಳೆದು ದೊಡ್ಡವರಾದರೂ ಹೋಮ್‌ಸಿಕ್‌ನೆಸ್ ಯಾರನ್ನೂ ಬಿಡದು ಎಂದು ಅವನಿಂದ ತಿಳಿಯಿತು. ಅವು ಅವನಾಡಿದ ಸತ್ಯದ ಮಾತು. ಮನೆಯನ್ನು ಮನಸ್ಸಿಗಿಂತ ಹೆಚ್ಚು ಪ್ರೀತಿಸುವ ವ್ಯಕ್ತಿ ಮಾತ್ರ ಈ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದು ಅವಳಾಗಲೇ ನಿರ್ಧರಿಸಿಬಿಟ್ಟಿದ್ದಳು.
ಅದೊಂದು ಆಕಸ್ಮಿಕ, ಅಷ್ಟೇ ಸುಂದರ ಮಾತುಕತೆ. ಅವರು ಮತ್ತೊಮ್ಮೆ ಭೇಟಿಯಾಗದೆ ಇರಲು ಯಾವ ಕಾರಣಗಳೂ ಉಳಿದಿರಲಿಲ್ಲ. ‘ನಾನು ಹುಡುಕುತ್ತಿದ್ದ ಹುಡುಗ ಇವನೇ. ಗುಣವಂತ ಸಿಕ್ಕಾನೆಂಬ ಆಸೆ ಇಟ್ಟಿದ್ದೆ. ಆದರೆ ಅವನೇ ಎದುರಿದ್ದಾನೆ. ಥ್ಯಾಂಕ್ಸ್ ಟು ಕಾಫಿ ಸ್ಟಾಲ್...’ ಇದೊಂದು ಸುಂದರ ಪ್ರೇಮಕತೆಯಾಯ್ತು. ಮದುವೆಯಾಯ್ತು. ಪುಟ್ಟ ಸಂಸಾರ. ಅಷ್ಟೇ ಸುಂದರವಾದ ಮನೆ. ಪ್ರತೀ ಸಲ ಆಕೆ ಕಾಫಿಗೆ ಉಪ್ಪು ಬೆರೆಸಿ ಪ್ರೀತಿಯಿಂದ ಅವನಿಗೆ ಕೊಡುತ್ತಿದ್ದಳು. ಬದುಕು ಹೀಗೇ ಸಾಗಿತು... ಕಾಲದ ಜೊತೆಗೆ ಆತನೂ ಅವಳ ಬದುಕಿನಿಂದ ದೂರವಾಗಿಬಿಟ್ಟಿದ್ದ...
ಆವನ ಅಗಲಿಕೆಗೆ ಅವಳಲ್ಲಿ ಸಾಕಷ್ಟು ನೋವಿತ್ತು. ಪರಿಚಯವಾಗಿ ಬದುಕಿಗೊಂದು ಸುಂದರ ರೂಪ ಕೊಟ್ಟು ದೂರವಾದ ಅವನ ನೆನಪು ಅವಳಲ್ಲಿ ಸದಾ ಹಸಿರು.
ಅವನೊಂದು ಪತ್ರ ಬರೆದಿಟ್ಟಿದ್ದ. ‘ನಾನು ಸತ್ತ ಮೇಲೂ ಪ್ರೀತಿಸುವ ನನ್ನಾಕೆಗೆ ಕ್ಷಮಿಸು ನನ್ನನ್ನು. ಬ್ದುಕಿದ್ದ ಅಷ್ಟೂ ದಿನಗಳು ಒಂದೇ ಒಂದು ಮಹಾನ್ ಸುಳ್ಳಿನಿಂದ. ಇನ್ನೆಂದೂ ನಾನು ಸುಳ್ಳು ಹೇಳುವುದಿಲ್ಲ. ಆ ಸುಳ್ಫ಼ಿಗಾಗಿ ಕ್ಷಮೆ ಬೇಡುತ್ತೇನೆ. ಆ ಸುಳ್ಳೇನು ಗೊತ್ತಾ...ಆ ಉಪ್ಪಿರುವ ಕಾಫಿ!
ನೆನಪಿದೆಯಾ, ನಾವು ಮೊದಲ ಬಾರಿ ಕಾಫಿ ಬಾರ್‌ನಲ್ಲಿ ಭೇಟಿಯಾದಾಗ ತುಂಬಾ ಕಸಿವಿಸಿಗೊಂಡಿದ್ದೆ. ಮಾತು ತೊದಲುತ್ತಿತ್ತು. ನೀನು ಹೊರಟು ನಿಂತಾಗ್ ಕಾಫಿಗೆ ಉಪ್ಪು ಬೆರೆಸಿ ಕುಡಿದೆ. ನಿಜ ಹೇಳಬೇಕೆಂದರೆ ನನಗೆ ಬೇಕಾಗಿದ್ದು ಸಕ್ಕರೆ. ಬಾಯ್ತಪ್ಪಿ ಉಪ್ಪು ಅಂದುಬಿಟ್ಟೆ. ನಿನ್ನೆದುರು ಮಾತು ಬದಲಾಯಿಸಬಾರದು ಅಂದುಕೊಂಡು ಉಪ್ಪು ಬೆರೆಸಿ ಕಾಫಿ ಕುಡಿದೆ. ಆದರೆ ಅದೇ ನನ್ನ ಬದುಕಿಗೆ ಸುಂದರ ಸಂಭಾಷಣೆಯಾಗುತ್ತದೆ ಅಂತಂದುಕೊಂಡಿರಲಿಲ್ಲ. ಬದುಕಿದ್ದ ಇಷ್ಟು ವರ್ಷಗಳಲ್ಲಿ ಇದನ್ನು ನಿನ್ನಲ್ಲಿ ಹೇಳಬೇಕೆಂದುಕೊಂಡಾಗಲೆಲ್ಲಾ ಹೆದರಿಕೆಯಾಗುತ್ತಿತ್ತು. ಮೊದಲು ಭೇಟಿಯಾದಾಗ ನಿನ್ನಲ್ಲಿ ಸುಳ್ಳು ಹೇಳಬಾರದು ಅಂತ ನಿರ್ಧರಿಸಿದ್ದೆ. ಆದರೆ ಅಂದೇ ಪುಟ್ಟದೊಂದು ಸುಳ್ಳು ನಮ್ಮ ಬದುಕಾಯಿತು.
ಈಗ ದೇಹಕ್ಕೆಷ್ಟೇ ವಯಸ್ಸಾಗಿದೆ. ಪುಣ್ಯ ಮೊದಲು ನಾನು ಸಾಯುತ್ತಿದ್ದೇನೆ. ಈಗ ಮನಸ್ಸು ಹಗುರ ಎನಿಸಿದೆ. ಅಬ್ಬಾ!! ಉಪ್ಪು ಬೆರೆಸಿದ ಕಾಫಿ ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ?! ಆದರೆ ಕೊನೆಯ ಉಸಿರಿರುವ ತನಕ ಉಪ್ಪಿನ ಕಾಫಿಯೇ ಜೊತೆಯಾಯ್ತು. ಪ್ರತಿ ಬಾರಿಯೂ ಅದರಲ್ಲಿನ ಸಿಹಿಯ ಅನುಭವವಾಗುತ್ತಿತ್ತು. ನಿನ್ನಲ್ಲಿ ಸುಳ್ಳು ಹೇಳಿ ದ್ರೋಹ ಮಾಡಿದ್ದೇನೆಂದು ಎಂದೂ ಅನಿಸಿಲ್ಲ. ನೀನಿರುವಾಗ ಉಪ್ಪಿನ ಕಾಫಿ ಏನು ಮಹಾ? ನಿನ್ನೊಂದಿಗಿನ ಬದುಕೇ ಒಂದು ರೊಮಾಂಚನ. ಜೀವ ಹಾಗೂ ಜೀವನಕ್ಕೊಂದು ಹೊಸ ತಿರುವು ಕೊಟ್ಟವಳು ನೀನು. ಒಂದು ವೇಳೆ ಮುಂದಿನ ಜನ್ಮದಲ್ಲಿ ನೀನು ಸಿಗುವುದಾದರೆ ಉಪ್ಪಿನ ಕಾಫಿಯಾದರೂ ಪರವಾಗಿಲ್ಲ ನಾನು ಜೊತೆಗಿದ್ದೇನೆ.
ನಿನ್ನದೇ ಉಸಿರಲ್ಲಿ ನನ್ನೀ ಕೊನೇ ಉಸಿರು...
ಇಂತಿ ನಿನ್ನ ಪ್ರೀತಿಯ,

ಪತ್ರ ಓದಿ ಮುಗಿಸಿದ ನಂತರ ಆಕೆಯ ಕಣ್ಣೀರು ಕೆನ್ನೆಯಿಂದ ಜಾರಿ ತುಟಿಯ್ಂಚಿನಲ್ಲಿ ಲೀನವಾಯ್ತು. ಅವಳಿಗೂ ತುಳಿಯಿತು; ಉಪ್ಪಲ್ಲಿರುವ ಸಿಹಿಯ ರುಚಿ.

(ಆಂಗ್ಲಬಾಷೆಯಿಂದ ಅನುವಾದಿತ)