Friday, July 31, 2009


‘ಸಲಾಮ್ ಸಿನೆಮಾ’
‘ಸಾರ್ ಈವಾಗ್ಲೆ ಅಳಬೇಕಾ?’ ಇಪ್ಪತ್ತರ ಆಸುಪಾಸಿನ ಹುಡುಗ ಮಹಮ್ಮದ್ ಹಾದಿ ಆ ಕ್ಷಣಕ್ಕೆ ಅಳೋದಕ್ಕೆ ಸಿದ್ಧನಿರಲಿಲ್ಲ. ಕತ್ತಲಿನ ರಿಹರ್ಸಲ್ ಹಾಲ್‍ನಲ್ಲಿ ಮಾರುದ್ದ ಚೆಲ್ಲಿಕೊಂಡಿದ್ದ ಹ್ಯಾಲೋಜಿನ್ ಬೆಳಕಲ್ಲಿ ಆತನ ಮುಖ ಸ್ಪಷ್ಟವಾಗಿ ಕಾಣಿಸಿತ್ತಿಲ್ಲವಾದರೂ ಮೇಜಿನ ಮೇಲೆ ಒಂದಷ್ಟು ಕಾಗದದ ರಾಶಿಯ ನಡುವೆ ಮೊಣಕೈ ಗಲ್ಲಕ್ಕಿಟ್ಟು ‘ಕೇವಲ ಹತ್ತು ನಿಮಿಷ ಕೋಡುತ್ತೇನೆ. ಅಳಬೇಕು.’ ಎಂದು ಹಠ ಹಿಡಿದ ಮಗುವಿನಂತೆ ಕುಳಿತಿದ್ದ ಮಕ್ಬಲ್‍ಬಫ್.

ಇದು ಸಿನಿಮಾನಾ ಅಥವಾ ಸಾಕ್ಷ್ಯಚಿತ್ರನಾ ಅಂತಂದುಕೊಳ್ಳುವಷ್ಟರಲ್ಲಿ ಕಪ್ಪು ಪರದೆಯಲ್ಲಿ ಎಡದಿಂದ ಬಲಕ್ಕೆ ಹೆಸರುಗಳು ಬರಲಾರಂಭಿಸಿದವು. ಅಪರೂಪಕ್ಕೆ ನೋಡಿದ ನೆನಪಿಟ್ಟುಕೊಳ್ಳುವ ಸಿನಿಮಾ ಅದು. ಹೆಸರು ‘ಸಲಾಮ್ ಸಿನೆಮಾ’. ೧೯೯೪ ರಲ್ಲಿ ತೆರೆಕಂಡ ಪರ್ಷಿಯನ್ ಚಿತ್ರ. ಮೊಹಸೆನ್ ಮಕ್ಬಲ್‍ಬಫ್ ನಿರ್ದೇಶನದ ಈ ಚಿತ್ರಕ್ಕೆ ಸಿನೆಮಾನೆ ಕಥಾವಸ್ತು! ಸಿನೆಮಾ ಆತನಿಗೆ ಉಸಿರು. ಕ್ಯಾಮರಾಗಳು ಮಾತನಾಡುತ್ತವೆ! ಅವನ್ನು ಹತ್ತಿರದಿಂದ ಬಲ್ಲೆ ಎಂದು ಅದರ ಲೆನ್ಸ್ ಪಕ್ಕದಲ್ಲಿ ಮುಖವಿಟ್ಟು ಗಂಟೆಗಟ್ಟಲೆ ತಾನು ಹುಡುಕುತ್ತಿದ್ದ ಆ ಅದ್ಭುತ ಫ್ರೇಮ್‍ಗಾಗಿ ಹುಡುಕುತ್ತಿರುತ್ತಾನೆ.

‘ನೂರು ಅತ್ಯುತ್ತಮ ನಟ-ನಟಿಯರು ಬೇಕಾಗಿದ್ದಾರೆ’ ಹಾಗಂತ ಜಾಹಿರಾತು ನೀಡಿದ್ದ ಮಕ್ಬಲ್‍ಬಫ್ ಆಡಿಶನ್ ದಿನ ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ. ಆ ಮಹಾ ದೊಂಬಿಯ ಮಧ್ಯದಿಂದ ಬೆರಳೆಣಿಕೆಯಷ್ಟು ಜನರನ್ನು ಕಲಾವಿದರನ್ನಾಗಿಸೋ ಕಲೆ ಬಹುಶಃ ಆತನಿಗೆ ಮಾತ್ರ ಸಾಧ್ಯವಿತ್ತು ಅನ್ನೋದು ಚಿತ್ರ ನೋಡಿದಾಗ ದೃಢವಾಗುತ್ತದೆ. ಅವಕಾಶಕ್ಕಾಗಿ ಮೈಲಿಗಟ್ಟಲೆ ನಡೆದು ಪಕ್ಕದ ಪಾರ್ಕ್‍ನಲ್ಲಿ ಮಲಗೆದ್ದು ಬಂದಿದ್ದ ಅದೆಷ್ಟೋ ಮಂದಿ ಕ್ಯಾಮರಾ ಮುಂದೆ ಮೌನರಾಗುತ್ತಾರೆ.

ಬುರ್ಕಾ ತೊಟ್ಟು ಹದಿಹರೆಯದ ಕಾಲೇಜು ಹುಡುಗೀರು ಅವಕಾಶಕ್ಕಾಗಿ ಗೋಗರೆಯುತ್ತಾರೆ. ಇಂತಹ ಅದೆಷ್ಟೋ ಮಹಿಳೆಯರಲ್ಲಿ ತೊಟ್ಟ ಬುರ್ಕಾದಂತೆ ಪ್ರತಿಭೆ ತನ್ನನ್ನು ಮುಚ್ಚಬಾರದೆಂಬ ಹಠ ಮಕ್ಬಲ್‍ನಲ್ಲಿ ಕುತೂಹಲ ಹುಟ್ಟಿಸುತ್ತದೆ. ನಡೆಯುವ ಪ್ರತಿ ಘಟನೆ ಕ್ಯಾಮರಾದಲ್ಲಿ ದಾಖಲಾಗುತ್ತದೆ. ಆದರೆ ಅವರಿಗೆ ತಾವೆಲ್ಲಾ ಒಂದು ಪುಟ್ಟ ಸಿನೆಮಾದ ಪಾತ್ರದೊಳಗೆ ಪಾತ್ರಕ್ಕಾಗಿ ಹಪಹಪಿಸುತ್ತಿದ್ದೇವೆ ಅನ್ನೋ ಸತ್ಯ ಚಿತ್ರ ಬಿಡುಗಡೆಯಾಗುವವರೆಗೆ ತಿಳಿಯುವುದಿಲ್ಲ!

ಅಲ್ಲಿದ್ದ ಅಷ್ಟೂ ಮಂದಿಗೂ ಮಕ್ಬಲ್ ಹೇಳುವ ಹಾಗೂ ಕೇಳುವ ಮೊದಲ ಪ್ರಶ್ನೆ - ‘೩೦ ಸೆಕೆಂಡ್ ಕೋಡುತ್ತೇನೆ. ಅಳಬೇಕು’. ತಾಳ್ಮೆ ಕಳೆದುಕೊಂಡ ಒಬ್ಬಾತ, ‘ಏಕಾ ಏಕಿ ಅಳೋದಂದ್ರೆ ತಮಾಷೆನಾ? ನಿಮ್ಮ ಸಹ ಕಲಾವಿದರು ಆ ೩೦ ಸೆಕೆಂಡ್‍ನಲ್ಲಿ ಅತ್ತು ತೋರಿಸಲಿ ನೋಡೋಣ... ಸವಾಲಿಗೆ ಮಕ್ಬಲ್ ಗಲ್ಲದ ಮೇಲಿಟ್ಟು ಅಲ್ಲೇ ದೂರದಲ್ಲಿ ಹ್ಯಾಲೊಜಿನ್ ಬಲ್ಬ್ ಹಿಡಿದು ನಿಂತಿದ್ದ ಇಳಿ ವಯಸ್ಸಿನ ಜಾಹೆದ್‍ನನ್ನು ಕರೆಯುತ್ತಾನೆ. ಕ್ಯಾಮರಾದ ಮುಂದೆ ಬಂದು ನಿಂತ ಜಾಹೆದ್ ಅರೆ ಕ್ಷಣದಲ್ಲಿ ಅತ್ತುಬಿಡುತ್ತಾನೆ. ಎಲ್ಲರೂ ಮೌನ! ಮಕ್ಬಲ್‍ನ ಗರಡಿಯಲ್ಲಿ ಪಳಗಿದಾಗಿನಿಂದ ಬದುಕಿನ ಸೂಕ್ಷತೆಗೆ ಒಗ್ಗಿಕೊಂಡ ರೀತಿ ಇಲ್ಲಿ ಸ್ಪಷ್ಟವಾಗುತ್ತದೆ.
"Not everyone can become a great artist.but a great artist can come from anywhere"
ಪ್ರೇಕ್ಷಕರೇ ಪಾತ್ರಗಳಾದ ಈ ಚಿತ್ರ ಸಿಕ್ಕರೆ ನೋಡಿ. ನೀವೂ ಹೇಳುತ್ತೀರ...‘ಸಲಾಮ್ ಸಿನೆಮಾ’...
(ಈ ಸಿನೆಮಾ ನೋಡು ಅಂತಾ ತಾಕೀತು ಮಾಡಿದ ನನ್ನ ಗೆಳೆಯನಿಗೂ ಸಲಾಮ್!)

Wednesday, July 15, 2009

ಇನ್ನೆರಡು ಹೊಸ ವಿನ್ಯಾಸಗಳು


ಆಳ್ವಾಸ್ ಕಾಲೇಜಿನ ವಾರ್ಷಿಕ ಸಂಚಿಕೆ / ಜೈ ಕನ್ನಡಮ್ಮ ವಿಶೇಷಾಂಕ