Wednesday, May 6, 2009ಕಾಲೇಜಿನ ಬೆಂಚುಗಳ ಉದ್ದಗಲಕ್ಕೂ ಕೆತ್ತಿದ ಅಕ್ಷರಗಳಲ್ಲಿ, ಯಾರಿಗೋ ಕೊಡಲು ಮನಸ್ಸಿಟ್ಟು ಮೆಚ್ಚಿ ಬರೆದ ಪದಗಳಲ್ಲಿ, ಅಗಲಿಕೆಯೆ ಅನಿವಾರ್ಯತೆಯ ಅಂಚಿನ ಆಟೋಗ್ರಾಫ್ ಎಂಬ ಸುಂದರ ಪುಸ್ತಕದ ಕೊನೆಯ ಹಾಳೆಯಲ್ಲಿ ನಮ್ಮನ್ನು ನಾವು ಬರೆದುಕೊಂಡಿದ್ದೇವೆ. ಈವರೆಗೆ ಬದುಕಿದ ಅಷ್ಟೂ ದಿನ ನಾವೊಂದು ಸುಂದರ ಬರಹವಾಗಿದ್ದೆವು ಎನ್ನುವುದನ್ನು ನನ್ನಂತ ಅದೆಷ್ಟೋ ಮಂದಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ!

ಆ ದಿನಗಳು ಎಲ್ಲಿ ಕಳೆದುಹೋದವೋ ಗೊತ್ತಿಲ್ಲ! ಯಾರು ಓದುತ್ತಾರೋ ಗೊತ್ತಿಲ್ಲ, ಹಠಕ್ಕೆ ಬಿದ್ದು ಬರೆಯುತ್ತಿದ್ದ ದಿನಗಳವು. ಆವಾಗೆಲ್ಲಾ ಬರೆಯೋದಕ್ಕೆ ವಿಷಯಗಳು ಬೇಕಾಗಿರಲಿಲ್ಲ. ಬರೆದದ್ದೇ ವಿಷಯವಾಗಿಬಿಡುತ್ತಿತ್ತು. ಬರೆದ ಪುಟ್ಟ ಲೇಖನಕ್ಕೆ ಗೆಳೆಯರ ಮೆಚ್ಚುನುಡಿ ಅದೇನೋ ಖುಷಿ ಕೊಡುತ್ತಿತ್ತು.

ಅಪರೂಪಕ್ಕೆ ಹೊತ್ತುಗೊತ್ತಿಲ್ಲದೆ ಬರುವ ಬೆಂಗಳೂರು ಮಳೆಯಂತೆ ಈ ಬರವಣಿಗೆಯೂ ಒಂಥರಾ ವಿಚಿತ್ರ. ಏನಾದರೂ ಬರೆಯಬೇಕು ಎಂದಾಗ ಯಾವ ವಿಷಯವೂ ಸಿಗೋಲ್ಲ. ವಿಷಯ ಸಾಕಷ್ಟಿದೆ, ಹೇಗೆ ಶುರುಮಾಡೋದು ಗೊತ್ತಾಗುತ್ತಿಲ್ಲ. ಆದರೂ ಅನ್ನಿಸಿದ್ದನ್ನು ಅಕ್ಷರವಾಗಿಸೋದಂದ್ರೆ ಅದೆಂಥದೋ ಮಜಾ...

ಹಾಗಾದರೆ ಶೇಕ್ಸ್‍ಪಿಯರ್, ಶೆಲ್ಲಿ, ಕೀಟ್ಸ್ ಇವರೆಲ್ಲಾ ನಮ್ಮಂತೆ ಮನುಷ್ಯರಲ್ವಾ? ಹತ್ತು ಜನುಮ ಕಳೆದರೂ ಹತ್ತಾರು ಬಗೆಯ ಅರ್ಥ ಕೊಡುವ ಹತ್ತರಿಂದ ಹನ್ನೆರಡು ಸಾಲುಗಳ ಪುಟ್ಟ ಪದ್ಯಗಳನ್ನು ಹೇಗೆ ಬರೆದರು ಅವರೆಲ್ಲಾ? ನಿಜ. ನಾವು ಕೇವಲ ಬರೆಯುತ್ತೇವೆ. ಅವರು ಬರವಣಿಗೆಯನ್ನು ಬದುಕುತ್ತಾರೆ!

ಈಗಲೂ ನೆನಪಿದೆ. ಹಾಸ್ಟೆಲ್‍ನಲ್ಲಿನ ಆ ದಿನಗಳು! ಒಂದು ರೂಪಾಯಿಯ ಆಕಾಶ ನೀಲಿ ಬಣ್ಣದ ಕಾಗದದ ತುದಿಯಲ್ಲಿ ಶ್ರೀ ಅಂತ ಶುರುಮಾಡಿ ಕೊನೆಯಲ್ಲಿ ‘ಇಂತಿ ನಿಮ್ಮ ಮಗ’ ಅಂತಾ ಕೊನೆಗೊಳಿಸುವ ಖುಷಿ ಈಗಿನ ಮೊಬೈಲ್ ಮೆಸೇಜಿಗಿಲ್ಲ ಬಿಡಿ. ಒಂದು ಸಮಾಧಾನ ಅಂದರೆ ಹಾಸ್ಟೆಲ್ ದಿನಗಳಲ್ಲಿಅಮ್ಮ ಬರೆದ, ಆಪ್ತ ಗೆಳೆಯ ಗೆಳತಿಯರು ಬರೆದ ಅಷ್ಟೂ ಕಾಗದಗಳು ಆ ನನ್ನಲ್ಲಿ ಇನ್ನೂ ಜೋಪಾನವಾಗಿವೆ. ಬಿಡುವಾದಾಗ ಓದುತ್ತೇನೆ... ತಂಪನೆಯ ಗಾಢ ಮೌನ ನನ್ನನ್ನು ಆವರಿಸುತ್ತದೆ. ಅಮ್ಮನ ಮುದ್ದಾದ ಅಕ್ಷರಗಳು ಮತ್ತೆ ನೆನಪಾಗುತ್ತದೆ.

ಬೆಂಗಳೂರಿಗೆ ಬಂದಾಗಿನಿಂದ ಬರವಣಿಗೆ ಮರೆತುಹೋಗಿದೆ. ಈಗ ಬರೆಯೋದು ಅಂದರೆ ಸಂಬಳದ ಚೆಕ್ ಹಿಂದೆ ಹಾಕೋದು ಅಷ್ಟೇ ಸೀಮಿತ! ಪರಿಸ್ತಿತಿ ನಮ್ಮನ್ನು ಬದಲಾಯಿಸಿದೆ. ಪುಸ್ತಕ ಓದುವ ಹುಚ್ಚಿತ್ತು. ಈಗ ಅದೂ ಬಿಟ್ಟು ಹೊಗಿದೆ. ಯಾವಾಗಲೂ ಚಾಟಿಂಗ್, ಆರ್ಕುಟ್, ಮೇಸೇಜುಗಳಲ್ಲಿ ನನ್ನನ್ನು ನಾನು ಕಳೆದುಕೊಂಡಿದ್ದೇನೆ ಅನ್ನಿಸುತ್ತದೆ. ಅರೆ! ಬರವಣಿಗೆಗೂ ರಿಸೆಸ್ಸನ್ ಬಂತಾ ಅಂತಂದುಕೊಂಡಿದ್ದು ನಿಜ.

ಪ್ರಶಸ್ತಿ ಪಡೆಯುವ ಪುಸ್ತಕ ಬರೆಯಬೇಕಾಗಿಲ್ಲ. ಕಡೇ ಪಕ್ಷ ನಾನು ಓದಬಹುದಾದ ಒಟ್ಟಾರೆ ಗೀಚಿದ ಒಂದಷ್ಟು ಸಾಲುಗಳನ್ನು ಬರೆಯಲೇಬೇಕು ಅಂತ ಹಠ ಮಾಡಿ ಬರೆಯಲು ಹೊರಟೆ. ಅಷ್ಟರಲ್ಲಾಗಲೇ ಈ ಪುಟ್ಟ ಬರವಣಿಗೆ ನಿಮ್ಮ ಮುಂದಿದೆ. ನನಗಾಗಿ ಓದಿ. ಸಾಧ್ಯವಾದರೆ ನನಗೆ ಬುದ್ಧಿ ಹೇಳಿ. ಮತ್ತೆ ಬರೆಯುತ್ತೇನೆ...

9 comments:

ಧರಿತ್ರಿ said...

ಬಹಳಷ್ಟು ಬಾರಿ ನಾನೂ ಹೀಗೆ ಯೋಚಿಸಿದೆ. ಯಾರೋ ಗೀಚಿದ ನಾಲ್ಕು ಅಕ್ಷರಗಳನ್ನು ಮತ್ತೆ ಮತ್ತೆ ಕಣ್ಣಿಗೊತ್ತಿಕೊಂಡಿದ್ದೆ. ಹಾಸ್ಟೇಲ್ ನಲ್ಲಿ ಹಾಡಿದ ಸುಂದರ ಭಕ್ತಿಗೀತೆಗಳು, ಭಾವಗೀತೆಗಳು, ಲೈಬ್ರೆರಿಯಲ್ಲಿ ಹಠಕ್ಕೆ ಬಿದ್ದು ಓದುತ್ತಿದ್ದ ಪುಸ್ತಕಗಳು,..ಎಲ್ಲವೂ ಸುರುಳಿಯಂತೆ ಸುತ್ತಿ ಛೇ! ನಾನು ಯಾಕೆ ಇದನ್ನೆಲ್ಲ ಬಿಟ್ಟು ಬೆಂಗಳೂರಿಗೆ ನನ್ನ ನಾ ಒಡ್ಡಿಕೊಂಡೆ? ಅಂತ ನಿಟ್ಟುಸಿರು ಬಿಟ್ಟಿದ್ದೆ. ಒಂದು ವರ್ಷ ಹೀಗೆ ಯೋಚಿಸುತ್ತಾ ಕಳೆದೆ. ಆದರೆ ಬದಲಾಯಿಸಿಕೊಳ್ಲಲು ಸಾಧ್ಯವಿದೆ ಅನ್ನೋದು ಗೊತ್ತಾಗಿದ್ದು ಕಳೆದ ಒಂದು ವರ್ಷದಿಂದೀಚಿಗೆ. ಬಹಳಷ್ಟು ಭಾವಗೀತೆಗಳನ್ನು ಕೇಳೋದು, ುತ್ತಮ ಪುಸ್ತಕಗಳನ್ನು ಓದೋದು, ಅಲ್ಲಿಂದ ಬೇಕೆನಿಸಿದ ಸುಂದರ ಸಾಲುಗಳನ್ನು ನನ್ ಪುಟ್ಟ ಡೈರಿಯಲ್ಲಿ ಗೀಚೋದು...ಎಲ್ಲಾವನ್ನೂ ಮತ್ತೆ ಬೆಳೆಸಿಕೊಂಡೆ. ಸಮಯವನ್ನೆ ಹೊದ್ದುಕೊಂಡು ಮಲಗಿ ಸಮಯವಿಲ್ಲ ಅಂತ ಗೊಣಗೋದಕ್ಕಿಂತ ಇದ್ದುದ್ದರಲ್ಲಿ ಖುಷಿಯಿಂದ ಕಳೆಯುವುದು ಒಳ್ಳೆದಲ್ವೇ? ಒಳ್ಳೆಯ ಬರಹ. ಶುಭವಾಗಲೀ...

-ಧರಿತ್ರಿ

ಏಕಾಂತ said...
This comment has been removed by the author.
ಏಕಾಂತ said...

ಥ್ಯಾಂಕ್ಯು ಧರಿತ್ರಿ! ಹೀಗೆ ಬಹಳಷ್ಟು ಬಾರಿ ನನ್ನನ್ನು ನಾನು ಕಳೆದುಕೊಂಡಿದ್ದೇನೆ. ಹೀಗೆ ಯಾರಾದರು ಸ್ನೇಹಿತರು ಹುಡುಕಿಕೋಡುತ್ತಾರೆ. ಮತ್ತೆ ಬರವಣಿಗೆಯ ಬಾಯಾರಿಕೆಯಾಗುತ್ತದೆ...

ಗಿರಿ said...

ಲಕ್ಶ್ಮೀಕಾಂತ,

"ಈವರೆಗೆ ಬದುಕಿದ ಅಷ್ಟೂ ದಿನ ನಾವೊಂದು ಸುಂದರ ಬರಹವಾಗಿದ್ದೆವು...."

ಓಹ್.. ಅದೆಷ್ಟು ಅಗಾಧತೆ ಈ ಸಾಲಿಗಿದೆ.. ಹೌದಲ್ವಾ...
ಪತ್ರವ್ಯವಹಾರವಿಲ್ಲದ ಈ ಕಾಲದಲ್ಲಿ ಅದನ್ನು ನೆನೆಸಿಕ್ಕೊಂಡಾಗ ರೋಮಾಂಚನವಾಗುತ್ತೆ. ಹಳೆಯ ನೆನಪುಗಳ ಕೆದಕಿ ತೆಗೆದು ನೆನಪಿನಂಗಳದಲ್ಲಿ ಮೂರು ಹೆಜ್ಜೆಯಿರಿಸಿದ್ದಕ್ಕೆ ಥಾಂಕ್ಸ್...

ಅಭಿನಂದನೆಗಳು...
-ಗಿರಿ

ಶರಶ್ಚಂದ್ರ ಕಲ್ಮನೆ said...

ನಿಮ್ಮನ್ನು ಲಕ್ಷ್ಮಿಕಾಂತ ಎಂದು ಕರೆಯುವುದಕ್ಕಿಂತ ಏಕಾಂತ ಎಂದು ಕರೆಯುವುದರಲ್ಲೇ ಖುಷಿ ಇದೆ, ತಮ್ಮ ಒಪ್ಪಿಗೆ ಇದೆ ತಾನೇ ? :) ಬರಹ ಚನ್ನಾಗಿದೆ ಏಕಾಂತ ಅವ್ರೆ.. ನಿಜವಾಗಲೂ ನಾನು ಈಗಲೂ ಪತ್ರ ಬರೆಯುವ ಮಿತ್ರರು ಸಿಗುತ್ತಾರೋ ಎಂದು ಹುಡುಕುತ್ತಿರುವೆ.. ನಾವು ಚಿಕ್ಕವರಿದ್ದಾಗ ಬರೆದ ಮುದ್ದಾದ ಆ ಅಕ್ಷರಗಳು, ಈಗ ನಗು ತರಿಸುವ ಆಗಿನ ನಮ್ಮ ಮನದ ವಿಚಾರಗಳು, ಪತ್ರಗಳಿಗೆ ಕಾಯುತ್ತಿದ್ದ ದಿನಗಳು, ಆಟೋಗ್ರಾಫ್ ನಲ್ಲಿ ಬಿಟ್ಟು ಹೋದ ಸ್ನೇಹಿತರ ಹಸ್ತಾಕ್ಷರಗಳು ಎಲ್ಲವೂ ನೆನಪುಗಳನ್ನು ಕೆದಕಿ ಮನದಲ್ಲಿ ನಸುನಗೆಯೊಂದನ್ನು ಮೂಡಿಸುತ್ತವೆ... ನಿಮ್ಮ ಬರಹ ಆಪ್ತವಾಗಿದೆ... ಹೀಗೆ ಬರೆಯುತ್ತಿರಿ, ಯಾರು ಓದದೆ ಇರದಿದ್ದರೂ ಪರವಾಗಿಲ್ಲ, ನಾನಂತೂ ಓದುತ್ತೇನೆ :) ಶುಭವಾಗಲಿ

ಶರಶ್ಚಂದ್ರ ಕಲ್ಮನೆ

ಏಕಾಂತ said...

ಹಾಯ್ ಗಿರಿ...
ಬ್ಲಾಗಿನೊಳಗೆ ಬಂದದ್ದಕ್ಕೆ ಥ್ಯಾಂಕ್ ಯು!
ಬಹಳ ದಿನಗಳಿಂದ ಕಾಡಿದ ವಿಷಯವನ್ನು ಬರೆದಿದ್ದೇನೆ.
ಮೆಚ್ಚಿಕೊಂಡಿದ್ದಕ್ಕೆ ಖುಷಿಯಾಯಿತು. ಮತ್ತೆ ಬನ್ನಿ...

ಹಾಯ್ ಶರಶ್ಚಂದ್ರ ...
ಖಂಡಿತಾ ಏಕಾಂತ ಅಂತಾ ಕರೆಯಿರಿ. ಅದು ನನ್ನ ಇಷ್ಟದ ಹೆಸರು. ಮೋದಲು ಕೇವಲ ಇ-ಮೇಲ್ಗಷ್ಟೇ ಸೀಮಿತಿವಾಗಿತ್ತು. ಈಗ ಅದೇ ಅಡ್ಡ ಹೆಸರಾಗಿದೆ. ಬರಹಗಳ ಜೊತೆಗಿದ್ದೀರಿ ಅಂದಿದ್ದು ಖುಷಿಯಾಯಿತು. ಆಗಾಗ ಬರುತ್ತಿರಿ...

Arathi Patrame said...
This comment has been removed by the author.
Sibanthi Padmanabha K V said...

ಡಿಯರ್ ಲಕ್ಷ್ಮಿ, ಅಚಾನಕ್ಕಾಗಿ ನಿನ್ನ ಪುಟ್ಟ ಬರಹ ಓದಿದೆ. ಯಾಕೋ ತುಂಬಾ ಹಿಡಿಸಿತು. ಹಳೆ ದಿನ, ಜನ, ಮನ, ಅಕ್ಷರ, ಪತ್ರ ಇತ್ಯಾದಿಗಳಿಂದ ಮನಸ್ಸು ತುಂಬಿ ಕೊಳ್ಳುವವರಲ್ಲಿ ನಾನೂ ಒಬ್ಬ. ಹಾಗಾಗಿ ನಿನ್ನ ಮಾತು ವಿಶೇಷವಾಗಿ ಹಿಡಿಸಿತು. ಹೀಗೆ ಬರೆಯುತ್ತಿರು. ನೀನು ಚೆನ್ನಾಗಿ ಬರೆಯುತ್ತಿ. -ಸಿಬಂತಿ

srinidhi odilnala said...
This comment has been removed by the author.