Tuesday, February 23, 2010ಹೊತ್ತು ಕಂತುವ ಹೊತ್ತು...

‘ರೈಲಿನ ಹಳಿಗಳಂತೆ ಜೊತೆಯಾಗಿ ಸಾಗಬಹುದು. ಆದರೆ ಮುಂದೆಂದೂ ಒಂದಾಗಲಾರೆವು.’ಅಪರಿಚಿತರಿಬ್ಬರು ಎದುರಾಗಿ ಮಾತು-ಮೌನ, ಅಪ್ಪುಗೆ-ಒಪ್ಪಿಗೆ ಇವೆಲ್ಲವೂ ಒಮ್ಮೆಲೆ ಉಮ್ಮಳಿಸಿದಾಗ ಬದುಕುವ ಅಷ್ಟೂ ದಿನ ಜೊತೆಗಿರಿವ ಆಸೆ ಹುಟ್ಟುವುದು ಸಹಜ. ಇಂತಹ ಪುಟ್ಟದೊಂದು ಎಳೆ ಹಿಡಿದು ಹೆಣೆದಿರುವ ಸುಂದರ ಚಿತ್ರ ‘ಬಿಫೋರ್ ಸನ್‍ರೈಸ್’.

ಅಮೆರಿಕಾದಿಂದ ಫ್ರಾನ್ಸ್‍ಗೆ ಬಂದಿದ್ದ ನಾಯಕ ಜೆಸ್ಸಿ (ಈಥನ್ ಹೇಕ್), ಪ್ಯಾರಿಸ್ ಯುನಿವರ್ಸಿಟಿಗೆ ಹೊರಟಿದ್ದ ನಾಯಕಿ ಸಿಲೀನ್ (ಜೂಲಿಯಾ ಡೆಲ್ಪಿ) ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಯಾವುದೋ ಗಂಡ-ಹೆಂಡತಿ ಜಗಳ ಇವರಿಬ್ಬರ ಭೇಟಿಗೆ ನೆರವಾಗುತ್ತದೆ. ಒಂದಷ್ಟು ಮಾತು, ಜೊತೆ ಜೊತೆಗೆ ನಗು ಹಾಗೂ ಪುಸ್ತಕ-ಇವು ಅಲ್ಲಿದ್ದ ಸಾಕ್ಷಿ. ಮಾತಿಗಿಳಿದ ಮರುಕ್ಷಣ ಇವರಿಬ್ಬರಲ್ಲೂ ಬೇಕಾದವರನ್ನು ಭೇಟಿಯಾದ ಸಂತೋಷ.

ಪ್ರಿಯತಮೆಯಿಂದ ದೂರವಾಗಿ ಮರಳಿ ಅಮೆರಿಕಾ ಹೋಗಲು ಉಳಿಸಿಕೊಂಡ ಕಾಸು ಬಿಟ್ಟರೆ ಜೆಸ್ಸಿಗೆ ಅಲ್ಲಿ ಎಲ್ಲವೂ ಅನಿರೀಕ್ಷಿತ. ಅಜ್ಜಿಯ ಯೋಗಕ್ಷೇಮ ವಿಚಾರಿಸಿಕೊಂಡು ಮರಳಿ ಹೊರಟಿರುವ ಸಿಲೀನ್‍ಗೂ ಜೆಸ್ಸಿ ಬಗ್ಗೆ ಕುತೂಹಲ. ಮಾತು ನಿಲ್ಲಲಿಲ್ಲ. ರೈಲು ವಿಯೆನ್ನಾದಲ್ಲಿ ಬಂದು ನಿಂತಿದೆ. ಅವರದರ ದಾರಿ ಹಿಡಿಯಬೇಕು. ಇಬ್ಬರಿಗೂ ಹೀಗಾಗುವುದು ಬೇಡ. ಸಂಜೆ ತನಕ ಜೊತೆಗಿರುವಂಗೆ ಜೆಸ್ಸಿ ಕೇಳಿಕೊಳ್ಳುತ್ತಾನೆ. ಅವಳು ಬಯಸಿದ್ದೂ ಅದೇ.

ಅಪರೂಪಕ್ಕೆ ಅನಿರೀಕ್ಷಿತವಾಗಿ ಅಪರಿಚಿತರಾಗಿ ಭೇಟಿಯಾಗಿದ್ದೇವೆ. ಸಂಜೆ ಕಳೆದು ಮುಂಜಾನೆ ಸೂರ್ಯ ಮೂಡುವ ಹೊತ್ತಿಗೆ ಇಬ್ಬರೂ ವಾಪಾಸು ಹೊರಡಬೇಕಿದೆ. ಅಷ್ಟರೊಳಗೆ ಉಳಿದಿರುವ ೧೪ ಗಂಟೆ ಮತ್ತೆಂದೂ ಮರೆಯಲಾಗದ ರೀತಿ ಕಳೆಯಬೇಕು. ಇದೇ ಚಿತ್ರದ ಜೀವಾಳ.

ಲೋಕಲ್ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಎಳೆಯ ಮಕ್ಕಳಂತೆ ಕಚ್ಚಾಡುತ್ತಾ, ಪ್ರಶ್ನೆಗಳನ್ನು ವಿನಿಮಯ ಮಾಡುತ್ತಾ ಒಂದಷ್ಟು ಪೋಲಿತನ ಮತ್ತಷ್ಟು ತತ್ವ ಸಿದ್ಧಾಂತ ಜೊತೆಗೆ ಧಾರ್ಮಿಕ ವಿಚಾರಗಳ ವಿನಿಮಯ ಅವರಿಬ್ಬರ ಪ್ರಬುದ್ಧತೆಯನ್ನು ಬಿಂಬಿಸುತ್ತದೆ.
ಬದುಕು, ಬರಹ, ಊಟ, ನಿದ್ರೆ, ಇವತ್ತು ಇಲ್ಲಿ; ನಾಳೆ ಮತ್ತೆಲ್ಲೋ ಎನ್ನುತ್ತಾ ಪ್ರತೀ ಮಾತಲ್ಲಿ ಪ್ರಶ್ನೆಗಳನ್ನಿಡುತ್ತಾ ಜೆಸ್ಸಿ-ಸಿಲೀನ್ ಮನೋಭಾವಕ್ಕೆ ಬೇಗ ಹೊಂದಿಕೊಳ್ಳುತ್ತಾನೆ. ಅದು ಅಕ್ಷರಶ: ಮಾತುಗಳ ಮ್ಯಾರಥಾನ್! ಕೊನೆಯ ದೃಶ್ಯದವರೆಗೂ ಅವರಂದುಕೊಂಡಂತೆ ಆ ೧೪ ಗಂಟೆ ಪೂರ್ತಿಯಾಗಿ ಕಳೆಯುತ್ತಾರೆ.

ಕಾಫಿಬಾರ್ ‍ನಲ್ಲಿ ಕೂತು ಕೈಬೆರಳಲ್ಲೇ ಸ್ನೇಹಿತರಿಗೆ ಫೋನಾಯಿಸಿ ಒಬ್ಬರನ್ನೊಬ್ಬರು ಹೇಳಿಕೊಳ್ಳುವ ಪ್ರತಿ ಮಾತಿನ ಪ್ರಭಾವದಿಂದ ಅವರ ಪರಿಚಯ ಪ್ರೀತಿಯಾಗುತ್ತದೆ. ದಾರಿ ಮಧ್ಯೆ ಅಪರಿಚಿತನೊಬ್ಬ ತಾನು ಬಿಕ್ಷೆ ಬೇಡುವ ಬದಲು, ‘ಯಾವುದಾದರೊಂದು ಶಬ್ದ ಹೇಳಿ; ಕವನ ಬರೆಯುತ್ತೇನೆ. ಹಿಡಿಸಿದರೆ ಮಾತ್ರ ಕಾಸು ಕೊಡಿ’ ಎಂದಾಗ ಅವರಿಬ್ಬರಿಗೂ ಕುತೂಹಲ. ಸಿಲೀನ್ ನೀಡಿದ ‘ಮಿಲ್ಕ್ ಶೇಕ್’ ಶಬ್ದಕ್ಕೆ ಆತ ಅದ್ಭುತ ಕವನ ರಚಿಸುತ್ತಾನೆ. ಅದು ಚಿತ್ರದ ಸಾರಾಂಶವನ್ನು ನಾಲ್ಕೇ ಸಾಲುಗಳಲ್ಲಿ ಹೇಳಿದಂತಿದೆ.

ಇಬ್ಬರಿಗೂ ಹೊತ್ತು ಕಳೆದದ್ದು ಗೊತ್ತಿಲ್ಲ. ಗೋಪುರದ ಮೇಲೆ ಅವನಿತ್ತ ಮುತ್ತು ಸಿಲೀನ್‍ಗೆ ಬಲುದೊಡ್ಡ ಉಡುಗೊರೆ. ಕತ್ತಲಾದಂತೆ ಪುಟ್ಟದೊಂದು ಪಾರ್ಟಿ ಮಾಡಿ ಪಕ್ಕದ ಪಾರ್ಕ್‍ನಲ್ಲಿ ಮೈಮರೆಯುತ್ತಾರೆ. ಖಾಲಿಯಾದ ವೈನ್ ಬಾಟಲಿಯ ಪಕ್ಕದಲ್ಲಿ ಮಲಗಿ ಮೇಲಿರುವ ಒಬ್ಬಂಟಿ ಚಂದ್ರನಿಗೆ ಹೋಗದಿರಲು ತಾಕೀತು ಮಾಡುತ್ತಾರೆ.

ಸೂರ್ಯ ಹುಟ್ಟಲು ಕೆಲವೇ ನಿಮಿಷ. ಇಬ್ಬರೂ ಹೊರಟು ನಿಂತಿದ್ದಾರೆ. ಮಳೆ ನಿಂತು ಹೋದಾಗಿನ ಮೌನ ಮತ್ತೆ ಸಿಗುತ್ತದಾ? ಇಬ್ಬರಿಗೂ ಗೊಂದಲ. ರೈಲು ಹೊರಟಿದೆ. ಸಿಲೀನ್ ಕಣ್ಣಂಚಿನ ಕಳವಳದಲ್ಲಿ ಜಿಸ್ಸಿಗೂ ಮುಂದೇನು ಎಂದು ತೋಚದಾಗುತ್ತದೆ. ಹೌದು, ಮತ್ತೆ ಸಿಗಲೇಬೇಕು. ಆರು ತಿಂಗಳ ನಂತರ ಇದೇ ದಿನ ಇದೇ ಸ್ಥಳದಲ್ಲಿ ಸಿಗುವ ಜಿಸ್ಸಿಯ ಮಾತಿಗೆ ಸಿಲೀನ್ ಭಾವುಕಳಾಗುತ್ತಾಳೆ. ಇಬ್ಬರೂ ಅವರವರ ರೈಲೇರಿ ಕಿಟಕಿಯಾಚೆ ಮುಖ ಮಾಡಿ ಮೌನರಾಗುತ್ತಾರೆ. ಆರು ತಿಂಗಳ ನಂತರ ಮತ್ತೆ ಭೇಟಿಯಾಗುತ್ತಾರಾ... ಅದಕ್ಕೆ ಚಿತ್ರದ ಎರಡನೇ ಭಾಗ ‘ಬಿಫೋರ್ ಸನ್ ಸೆಟ್’ ನೋಡಬೇಕು. ಸಿಕ್ಕರೆ ಇವರೆಡೂ ಸಿನೆಮಾ ನೋಡಿ.

7 comments:

Anonymous said...

ಎರಡೂ ಚಿತ್ರ ನೋಡಿದ್ದೇನೆ, ಎರಡರಲ್ಲೂ ಮಾತುಕತೆಯೇ ಕಥೆ! ಎರಡನೆಯ ಭಾಗದಲ್ಲಂತೂ ಕಥೆಯ ಸಮಯ, ನಮ್ಮ ಸಮಯಕ್ಕೆ ಸಮಾಂತರವಾಗಿ ಸಾಗುತ್ತದೆ..(ಅಂದರೆ ಕತೆಯಲ್ಲಿ ಅರ್ಧಘಂಟೆ ಹಾದುಹೋದರೆ ನಮ್ಮ ಸಮಯವೂ ಅರ್ಧಘಂಟೆ ಸಾಗಿರುತ್ತದೆ.) ಆದರೂ ಚಿತ್ರ ರಸವತ್ತತೆ ಉಳಿಸಿಕೊಳ್ಳುವುದಕ್ಕೆ ಸಂಭಾಷಣೆ, ನಟನೆ ಮತ್ತು ನಿರ್ದೇಶನವೇ ಕಾರಣ!

-ರಂಜಿತ್.

ಮನಸು said...

tumba chennagi chitrada katheyannu namma mundittideeri. oLLeya niroopaNe

Narayan Bhat said...

ನಿಮ್ಮ ಆಕರ್ಷಕ ಬರಹ ಓದಿದ ಮೇಲೆ 'Before Sunset' ನೋಡಲೇಬೇಕೆಂದು ಅನಿಸಿದೆ.

ಶರಶ್ಚಂದ್ರ ಕಲ್ಮನೆ said...

ಮಾಹಿತಿಗಾಗಿ ಧನ್ಯವಾದಗಳು... ಪ್ರತಿ ಬಾರಿ ನಿಮ್ಮ ಬ್ಲಾಗ್ ಪುಟವನ್ನು ತೆರೆಯಲು ಪ್ರಯತ್ನಿಸಿದಾಗಲೂ ಏನಾದರೂ ಒಂದು ತೊಂದರೆ ಆಗುತ್ತಿತ್ತು.... ಬಹುಶ 'ಬಗ್' ಇತ್ತು ಎನ್ನಿಸುತ್ತದೆ... ಇಂದು ಯಾವುದೇ ತೊಂದರೆ ಇಲ್ಲದೆ ನಿಮ್ಮ ಬ್ಲಾಗನ್ನು ಪ್ರಥಮ ಬಾರಿಗೆ ಓದುತ್ತಿದ್ದೇನೆ... ಸಂತೋಷ ಎನ್ನಿಸುತ್ತಿದೆ :)

nenapina sanchy inda said...

hmm should watch this movie.
have you seen 'lost in translation'?
:-)
malathi S

ನನ್ನ ಮೂಲ said...
This comment has been removed by the author.
ತೇಜಸ್ವಿನಿ ಹೆಗಡೆ said...

ನಿಮ್ಮ ವಿವರಣೆಗಳಿಂದ ಚಿತ್ರಗಳ ಕುರಿತು ಆಸಕ್ತಿ ಹುಟ್ಟಿದೆ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ.