Tuesday, February 23, 2010



ಹೊತ್ತು ಕಂತುವ ಹೊತ್ತು...

‘ರೈಲಿನ ಹಳಿಗಳಂತೆ ಜೊತೆಯಾಗಿ ಸಾಗಬಹುದು. ಆದರೆ ಮುಂದೆಂದೂ ಒಂದಾಗಲಾರೆವು.’ಅಪರಿಚಿತರಿಬ್ಬರು ಎದುರಾಗಿ ಮಾತು-ಮೌನ, ಅಪ್ಪುಗೆ-ಒಪ್ಪಿಗೆ ಇವೆಲ್ಲವೂ ಒಮ್ಮೆಲೆ ಉಮ್ಮಳಿಸಿದಾಗ ಬದುಕುವ ಅಷ್ಟೂ ದಿನ ಜೊತೆಗಿರಿವ ಆಸೆ ಹುಟ್ಟುವುದು ಸಹಜ. ಇಂತಹ ಪುಟ್ಟದೊಂದು ಎಳೆ ಹಿಡಿದು ಹೆಣೆದಿರುವ ಸುಂದರ ಚಿತ್ರ ‘ಬಿಫೋರ್ ಸನ್‍ರೈಸ್’.

ಅಮೆರಿಕಾದಿಂದ ಫ್ರಾನ್ಸ್‍ಗೆ ಬಂದಿದ್ದ ನಾಯಕ ಜೆಸ್ಸಿ (ಈಥನ್ ಹೇಕ್), ಪ್ಯಾರಿಸ್ ಯುನಿವರ್ಸಿಟಿಗೆ ಹೊರಟಿದ್ದ ನಾಯಕಿ ಸಿಲೀನ್ (ಜೂಲಿಯಾ ಡೆಲ್ಪಿ) ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಯಾವುದೋ ಗಂಡ-ಹೆಂಡತಿ ಜಗಳ ಇವರಿಬ್ಬರ ಭೇಟಿಗೆ ನೆರವಾಗುತ್ತದೆ. ಒಂದಷ್ಟು ಮಾತು, ಜೊತೆ ಜೊತೆಗೆ ನಗು ಹಾಗೂ ಪುಸ್ತಕ-ಇವು ಅಲ್ಲಿದ್ದ ಸಾಕ್ಷಿ. ಮಾತಿಗಿಳಿದ ಮರುಕ್ಷಣ ಇವರಿಬ್ಬರಲ್ಲೂ ಬೇಕಾದವರನ್ನು ಭೇಟಿಯಾದ ಸಂತೋಷ.

ಪ್ರಿಯತಮೆಯಿಂದ ದೂರವಾಗಿ ಮರಳಿ ಅಮೆರಿಕಾ ಹೋಗಲು ಉಳಿಸಿಕೊಂಡ ಕಾಸು ಬಿಟ್ಟರೆ ಜೆಸ್ಸಿಗೆ ಅಲ್ಲಿ ಎಲ್ಲವೂ ಅನಿರೀಕ್ಷಿತ. ಅಜ್ಜಿಯ ಯೋಗಕ್ಷೇಮ ವಿಚಾರಿಸಿಕೊಂಡು ಮರಳಿ ಹೊರಟಿರುವ ಸಿಲೀನ್‍ಗೂ ಜೆಸ್ಸಿ ಬಗ್ಗೆ ಕುತೂಹಲ. ಮಾತು ನಿಲ್ಲಲಿಲ್ಲ. ರೈಲು ವಿಯೆನ್ನಾದಲ್ಲಿ ಬಂದು ನಿಂತಿದೆ. ಅವರದರ ದಾರಿ ಹಿಡಿಯಬೇಕು. ಇಬ್ಬರಿಗೂ ಹೀಗಾಗುವುದು ಬೇಡ. ಸಂಜೆ ತನಕ ಜೊತೆಗಿರುವಂಗೆ ಜೆಸ್ಸಿ ಕೇಳಿಕೊಳ್ಳುತ್ತಾನೆ. ಅವಳು ಬಯಸಿದ್ದೂ ಅದೇ.

ಅಪರೂಪಕ್ಕೆ ಅನಿರೀಕ್ಷಿತವಾಗಿ ಅಪರಿಚಿತರಾಗಿ ಭೇಟಿಯಾಗಿದ್ದೇವೆ. ಸಂಜೆ ಕಳೆದು ಮುಂಜಾನೆ ಸೂರ್ಯ ಮೂಡುವ ಹೊತ್ತಿಗೆ ಇಬ್ಬರೂ ವಾಪಾಸು ಹೊರಡಬೇಕಿದೆ. ಅಷ್ಟರೊಳಗೆ ಉಳಿದಿರುವ ೧೪ ಗಂಟೆ ಮತ್ತೆಂದೂ ಮರೆಯಲಾಗದ ರೀತಿ ಕಳೆಯಬೇಕು. ಇದೇ ಚಿತ್ರದ ಜೀವಾಳ.

ಲೋಕಲ್ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಎಳೆಯ ಮಕ್ಕಳಂತೆ ಕಚ್ಚಾಡುತ್ತಾ, ಪ್ರಶ್ನೆಗಳನ್ನು ವಿನಿಮಯ ಮಾಡುತ್ತಾ ಒಂದಷ್ಟು ಪೋಲಿತನ ಮತ್ತಷ್ಟು ತತ್ವ ಸಿದ್ಧಾಂತ ಜೊತೆಗೆ ಧಾರ್ಮಿಕ ವಿಚಾರಗಳ ವಿನಿಮಯ ಅವರಿಬ್ಬರ ಪ್ರಬುದ್ಧತೆಯನ್ನು ಬಿಂಬಿಸುತ್ತದೆ.
ಬದುಕು, ಬರಹ, ಊಟ, ನಿದ್ರೆ, ಇವತ್ತು ಇಲ್ಲಿ; ನಾಳೆ ಮತ್ತೆಲ್ಲೋ ಎನ್ನುತ್ತಾ ಪ್ರತೀ ಮಾತಲ್ಲಿ ಪ್ರಶ್ನೆಗಳನ್ನಿಡುತ್ತಾ ಜೆಸ್ಸಿ-ಸಿಲೀನ್ ಮನೋಭಾವಕ್ಕೆ ಬೇಗ ಹೊಂದಿಕೊಳ್ಳುತ್ತಾನೆ. ಅದು ಅಕ್ಷರಶ: ಮಾತುಗಳ ಮ್ಯಾರಥಾನ್! ಕೊನೆಯ ದೃಶ್ಯದವರೆಗೂ ಅವರಂದುಕೊಂಡಂತೆ ಆ ೧೪ ಗಂಟೆ ಪೂರ್ತಿಯಾಗಿ ಕಳೆಯುತ್ತಾರೆ.

ಕಾಫಿಬಾರ್ ‍ನಲ್ಲಿ ಕೂತು ಕೈಬೆರಳಲ್ಲೇ ಸ್ನೇಹಿತರಿಗೆ ಫೋನಾಯಿಸಿ ಒಬ್ಬರನ್ನೊಬ್ಬರು ಹೇಳಿಕೊಳ್ಳುವ ಪ್ರತಿ ಮಾತಿನ ಪ್ರಭಾವದಿಂದ ಅವರ ಪರಿಚಯ ಪ್ರೀತಿಯಾಗುತ್ತದೆ. ದಾರಿ ಮಧ್ಯೆ ಅಪರಿಚಿತನೊಬ್ಬ ತಾನು ಬಿಕ್ಷೆ ಬೇಡುವ ಬದಲು, ‘ಯಾವುದಾದರೊಂದು ಶಬ್ದ ಹೇಳಿ; ಕವನ ಬರೆಯುತ್ತೇನೆ. ಹಿಡಿಸಿದರೆ ಮಾತ್ರ ಕಾಸು ಕೊಡಿ’ ಎಂದಾಗ ಅವರಿಬ್ಬರಿಗೂ ಕುತೂಹಲ. ಸಿಲೀನ್ ನೀಡಿದ ‘ಮಿಲ್ಕ್ ಶೇಕ್’ ಶಬ್ದಕ್ಕೆ ಆತ ಅದ್ಭುತ ಕವನ ರಚಿಸುತ್ತಾನೆ. ಅದು ಚಿತ್ರದ ಸಾರಾಂಶವನ್ನು ನಾಲ್ಕೇ ಸಾಲುಗಳಲ್ಲಿ ಹೇಳಿದಂತಿದೆ.

ಇಬ್ಬರಿಗೂ ಹೊತ್ತು ಕಳೆದದ್ದು ಗೊತ್ತಿಲ್ಲ. ಗೋಪುರದ ಮೇಲೆ ಅವನಿತ್ತ ಮುತ್ತು ಸಿಲೀನ್‍ಗೆ ಬಲುದೊಡ್ಡ ಉಡುಗೊರೆ. ಕತ್ತಲಾದಂತೆ ಪುಟ್ಟದೊಂದು ಪಾರ್ಟಿ ಮಾಡಿ ಪಕ್ಕದ ಪಾರ್ಕ್‍ನಲ್ಲಿ ಮೈಮರೆಯುತ್ತಾರೆ. ಖಾಲಿಯಾದ ವೈನ್ ಬಾಟಲಿಯ ಪಕ್ಕದಲ್ಲಿ ಮಲಗಿ ಮೇಲಿರುವ ಒಬ್ಬಂಟಿ ಚಂದ್ರನಿಗೆ ಹೋಗದಿರಲು ತಾಕೀತು ಮಾಡುತ್ತಾರೆ.

ಸೂರ್ಯ ಹುಟ್ಟಲು ಕೆಲವೇ ನಿಮಿಷ. ಇಬ್ಬರೂ ಹೊರಟು ನಿಂತಿದ್ದಾರೆ. ಮಳೆ ನಿಂತು ಹೋದಾಗಿನ ಮೌನ ಮತ್ತೆ ಸಿಗುತ್ತದಾ? ಇಬ್ಬರಿಗೂ ಗೊಂದಲ. ರೈಲು ಹೊರಟಿದೆ. ಸಿಲೀನ್ ಕಣ್ಣಂಚಿನ ಕಳವಳದಲ್ಲಿ ಜಿಸ್ಸಿಗೂ ಮುಂದೇನು ಎಂದು ತೋಚದಾಗುತ್ತದೆ. ಹೌದು, ಮತ್ತೆ ಸಿಗಲೇಬೇಕು. ಆರು ತಿಂಗಳ ನಂತರ ಇದೇ ದಿನ ಇದೇ ಸ್ಥಳದಲ್ಲಿ ಸಿಗುವ ಜಿಸ್ಸಿಯ ಮಾತಿಗೆ ಸಿಲೀನ್ ಭಾವುಕಳಾಗುತ್ತಾಳೆ. ಇಬ್ಬರೂ ಅವರವರ ರೈಲೇರಿ ಕಿಟಕಿಯಾಚೆ ಮುಖ ಮಾಡಿ ಮೌನರಾಗುತ್ತಾರೆ. ಆರು ತಿಂಗಳ ನಂತರ ಮತ್ತೆ ಭೇಟಿಯಾಗುತ್ತಾರಾ... ಅದಕ್ಕೆ ಚಿತ್ರದ ಎರಡನೇ ಭಾಗ ‘ಬಿಫೋರ್ ಸನ್ ಸೆಟ್’ ನೋಡಬೇಕು. ಸಿಕ್ಕರೆ ಇವರೆಡೂ ಸಿನೆಮಾ ನೋಡಿ.

Sunday, January 31, 2010

ಮತ್ತೆರಡು ಹೊಸ ಮುಖಗಳು !

ಪ್ರತಾಪ್ ಪುಸ್ತಕಕ್ಕೆ ಮತ್ತೆರಡು ಮುಖಪುಟ ವಿನ್ಯಾಸ. ಹೇಗಿದೆ ಹೇಳಿ...

Friday, October 16, 2009


Monday, September 14, 2009

ಚಲಿಸುವಾ..ಚೆಲುವೆ....

ಮತ್ತೊಂದು ಮಿಕ್ಸಿಂಗ್ ಮಾಡಿದ್ದೇನೆ. ಹೊಸ ಕನ್ನಡ ಚಿತ್ರ ‘ಉಲ್ಲಾಸ ಉತ್ಸಾಹ’ದ ಹಾಡಿಗೆ ಹಿಂದಿ ರಣ್ ಬೀರ್ ಕಪೂರ್ ವಿಡಿಯೋ. ನೋಡ್ತೀರಲ್ವಾ...

Youtube: http://www.youtube.com/watch?v=4WSbKKjELmQ

Thursday, August 27, 2009

ಸ್ಸು ಬೆಂಗಳೂರಿಂದ ಹೋರಟಿದ್ದು ಲೇಟು. ಇಲ್ಲದಿದ್ದರೆ ಬೆಳಗ್ಗೆ 6:50ಕ್ಕೆ ಕಳಸ ತಲುಪಿರುತ್ತಿದ್ದೆ. ಅಲ್ಲಿಂದ ಬಸ್ರಿಕಟ್ಟೆಯ ನನ್ನ ಮನೆಗೆ 18ಕಿಮಿ. ಮೂರು ವರ್ಷಗಳಾದ ಮೇಲೆ ಹಬ್ಬಕ್ಕೆ ಮನೆಗೆ ಹೋರ‍ಟಿದ್ದು. ಸಹಜ ಕುತೂಹಲ ಜೊತೆಗೆ ರಾಶಿ ಪ್ರೀತಿ. ಕಳಸದಲ್ಲಿ ಇಳಿದಾಗಲೇ ಗೊತ್ತಾಗಿದ್ದು ಅದೇ ಬಸ್ಸಲ್ಲಿ ಹಳೇಯ ಖಾಯಂ ದೋಸ್ತ್‍ಗಳೂ ಇದ್ದರು ಅಂತ. ಕಳಸದಿಂದ ಮನೆ ಕಡೆ ಹೋಗೋ ಬಸ್ ಹತ್ತಿ ಕೊನೇಯ ಸೀಟಿನ ಮೂಲೆಯಲ್ಲಿ ಮುದುಡಿ ಕೂತೆ. ಸೀಳಿ ಬರುತ್ತಿತ್ತು ಛಳಿ ಗಾಳಿ. ಕಿವಿ ಬೆಚ್ಚಗಿರಲಿ ಅಂತಾ ಪ್ಲೇಯರ್ ಸಿಕ್ಕಿಸಿಕೊಂಡೆ. ಜೊತೆಗೆ ಇಷ್ಟದ ಹಾಡು. ಲೆಕ್ಕವಿಲ್ಲದಷ್ಟು ಸಲ ಓಡಾಡಿದ ಆ ದಾರ‍ಿಯಲ್ಲಿ ಕಳೆದುಹೋದ ನೆನಪುಗಳಿಗೆ ಲೆಕ್ಕವಿಲ್ಲ. ತಣ್ಣನೆಯ ಮುಂಜಾವಿನ ಸಿಹಿಗಾಳಿಯ ಜೊತೆಗೆ ಅವೂ ಹಿಂದೆಯೇ ಬರುತ್ತಿದ್ದವೋ ಏನೊ.

ಹುಟ್ಟೂರಿಗೆ ಕಾಲಿಡುತ್ತಿದ್ದಾಗಿನ ಪುಟ್ಟ ಖುಷಿಯ ಕಿಮ್ಮತ್ತೇ ಬೇರೆ. ಬಸ್ಸಿನಿಂದಿಳಿದ್ದು ಗೂಡಂಗಡಿ ಮೋಚುರಿಗೆ ಸಣ್ಣದೊಂದು ಸಲಾಮು ಹೊಡೆದು ಸಿಕ್ಕ ನಗುವಿನ ಜೊತೆ ಒಂಚೂರು ಮಾತು. ಮನೆ ಓಳಹೋಗುವ ಮುನ್ನ ಖಾಸಾ ದೋಸ್ತ್ ಶರೂ ಹಾಗು ಸಮ್ಮು ಸಿಕ್ಕಾಗ ಮತ್ತಷ್ಟು ಹೆಚ್ಚಿತ್ತು ಹಳ್ಳಿ ಪ್ರೀತಿ. ಮನೆಯ ಓಳ ಹೊಕ್ಕೆ. ಪಾತ್ರೆಗೆ ಸೋಪು ಹಚ್ಚುತ್ತಿದ್ದಳು ಅಮ್ಮ. ನಾನು ಬಂದಾಗ ಅವಳಲ್ಲಿನ ಹೊಸ ನಗು ಕಂಡುಹಿಡಿಯುವ ರೀತಿ ನನಗೆ ಹೊಸದಲ್ಲ. ‘ಇತ್ತೆ ಬತ್ತನಾ? ನಿದ್ರೆ ಬತ್ತುಂಡಾ?’ (ಇವಾಗ ಬಂದಿಯಾ? ನಿದ್ರೆ ಬಂತಾ?) (ಮನೆ ಬಾಷೆ ತುಳು) ಮನೆ ಬಿಟ್ಟು ೯ ವರ್ಷಗಳಾದರೂ ಆಕೆಯ ಕಾಳಜಿ, ಆರೈಕೆ, ನೀರು ದೋಸೆ ಹಾಗೂ ಚಹಾ ಇನ್ನೂ ಬದಲಾಗಿಲ್ಲ. ಎಷ್ಟಾದರೂ ಅಮ್ಮ ಅಲ್ವಾ.
ಸುಮ್ಮನೆ ಕೂರೋ ರೀತಿನೇ ಗೊತ್ತಿಲ್ಲ ಅಪ್ಪನಿಗೆ. ಹಳ್ಳಿಯ ಪ್ರತಿ ಅಪ್ಪಂದಿರೂ ಹೀಗೆನೇ. ಕೆಲಸವೇ ಅವರಿಗೆ ಸಮಾನ ಹಾಗೂ ಸಮಾಧಾನ. ಗ್ಯಾರೇಜಿನ ಮೆಶೀನುಗಳ ಮಧ್ಯೆ ಗ್ರ‍ಿಸು ಮೆತ್ತಿದ ಕೈಗಳಿಂದ ಕನ್ನಡಕ ತೆಗೆದು ಕ್ಷೇಮ ವಿಚಾರಿಸಿದರು. ಬೆಚ್ಚಗೆ ಬ್ರೇಕ್ ಫಾಸ್ಟ್ ಮಾಡಿ ಊರು ಸುತ್ತೋಕೆ ಹೊರ‍ಟೆ.

ಬಸ್ರಿಕಟ್ಟೆ ಬದಲಾಗಿಲ್ಲ. ಬದಲಾಗೋದೂ ನಮಗೆ ಬೇಕಿಲ್ಲ. ಎರಡು ವರ್ಷಕ್ಕೊಮ್ಮೆ ಇಲ್ಲಿನ ರಸ್ತೆಗೆ ಡಾಂಬಾರು ಹಚ್ಚಿ ಹೋಗುತ್ತಾರೆ. ಕಾಲುದಾರಿಯಲ್ಲಿ ಬರಿಗಾಲಲ್ಲಿ ಮೈಲಿಗಟ್ಟಗೆ ನಡೆಯೋ ಇಲ್ಲಿಯವರಿಗೆ ಅದು ಕಾಡುವ ಸಮಸ್ಯೆಯೇನಲ್ಲ. ಸ್ವಚ್ಛ ಊರು. ಹಾಗೆಯೇ ಮನಸ್ಸಿರೋ ಜನ. ಹತ್ತಿರದ ಊರು ಕುಪ್ಪಳ್ಳಿ, ಪಕ್ಕಕ್ಕೆ ತಾಗಿ ಮಲಗಿರೋ ಕಾಫಿ ತೋಟ, ತಲೆ ಇತ್ತಿ ಮುಖ ಮಾಡಿರೋ ಕುದುರೆಮುಖ, ನೆರಳಾಗಿ ನಿಂತಿರೋ ಮೇರುತಿ ಬೆಟ್ಟ. ಅರೆಕ್ಷಣ ಅಲ್ಲಿ ನಿಂತಿದ್ದ ನಾನು ಬರೇ ಸೂಕ್ಷ್ಮ! ಬಹುಶಃ ಇದೇ ಇರಬೇಕು ಹಳ್ಳಿ ಪ್ರೀತಿ.

ಉಳಿದೆರಡೂ ದಿನ ಗಮ್ಮತ್ತು. ಹಬ್ಬ ಹಬ್ಬ ಹಬ್ಬ. ಆತ್ಮೀಯ ಗೋಪಾಲ್ ಹಾಗೂ ಗೆಳೆಯರೊಂದಿಗೆ ತಡರಾತ್ರಿಯ ಸುಗಮ ಸಂಗೀತ. ನೆನೆಸಿಕೊಂಡರೆ ನಗು. ಜಿಟಿ ಜಿಟಿ ಮಳೆಯೊಂದಿಗೆ ಸಂಭ್ರಮದ ಓಡಾಟ. ಇಷ್ಟಾದರೂ ಕೆಲಸದೂರು ಬೆಂಗಳೂರು ನೆನಪಾಗಲಿಲ್ಲ. ನೆನಪು ಮಾಡಿಕೊಳ್ಳಲೂ ಮನಸಾಗುತ್ತಿರಲಿಲ್ಲ.

ಮೂರನೇ ಕ್ಲಾಸಿನಲ್ಲಿರುವಾಗ ಶಂಕರ ಹೆಗಡೆ ಅಂಗಂಡಿಯಿಂದ ಮಸಾಲೆ ಕಡಲೆ ಕದ್ದಾಗ ಆದ ಅನುಮಾನವೇ ದೊಡ್ಡದೆಂದು ನಂಬಿದ್ದೆ. ಆದರೆ ಅದಕ್ಕಿಂದ ಮಿಗಿಲಾದ ಮೊಗೆದಷ್ಟು ಪ್ರೀತಿ ಈ ಊರಲ್ಲಿದೆ ಅನ್ನೋದು ಈಗ ಕಂಡುಕೊಂಡಿದ್ದೀನಿ. ಎಲ್ಲೋ ಓದಿದ್ದೆ. ‘ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’. ಮತ್ತೆ ಮುಂಜಾವು. ನುಗ್ಗಿ ಬರುತ್ತಿತ್ತು ಮಳೆ. ವಾಪಾಸು ಹೊರಡಬೇಕು ರಾಜಧಾನಿಗೆ. ಆ ಜಡಿ ಮಳೆಯಲ್ಲೂ ಬೈಕ್ ಏರಿ ಬಸ್ಸು ಹತ್ತಿಸಿದ ಆತ್ಮೀಯ ಆನಂದ್.
ಬಿಟ್ಟು ಬಂದಿದ್ದೀನಿ. ಮೆತ್ತಗೆ ಕಾಡುವ ಮಾತನಾಡುವ ಊರನ್ನು ಮತ್ತೆ ಬರುತ್ತೀನಿ ಅನ್ನೋ ಮಾತು ಕೊಟ್ಟು. ಮುಂದಿನ ಬಾರಿ ನೀವೂ ಬನ್ನಿ. ನನ್ನೂರಿಗೆ...

Friday, August 21, 2009


Wednesday, August 19, 2009